ಢಾಕಾ: ಅರ್ಹತೆ ಆಧರಿಸಿಯೇ ಸರ್ಕಾರಿ ಉದ್ಯೋಗ ನೀಡಬೇಕು ಎಂದು ಒತ್ತಾಯಿಸಿ ರಾಜಧಾನಿ ಢಾಕಾದಲ್ಲಿ ಮಂಗಳವಾರ ನಡೆದ ಬೃಹತ್ ರ‍್ಯಾಲಿ ವೇಳೆ ನಡೆದ ಸಂಘರ್ಷದಲ್ಲಿ 400ಕ್ಕೂ ಅಧಿಕ ಮಂದಿ ಪ್ರತಿಭಟನಕಾರರು, ಪೊಲೀಸರು ಗಾಯಗೊಂಡಿದ್ದಾರೆ.
ಪ್ರತಿಭಟನೆ ಕೈ ಬಿಟ್ಟು ತರಗತಿಗಳಿಗೆ ಹಾಜರಾಗುವಂತೆ ಬಾಂಗ್ಲಾದೇಶ ಪ್ರಧಾನಿ ಹಾಗೂ ಸುಪ್ರೀಂಕೋರ್ಟ್ ಸೂಚಿಸಿತ್ತು. ಇದರ ಹೊರತಾಗಿಯೂ, ಢಾಕಾದ ಎರಡು ವಿಶ್ವವಿದ್ಯಾಲಯಗಳಲ್ಲಿ ಶಾಂತಿಯುತವಾಗಿ ಪ್ರತಿಭಟಿಸುತ್ತಿದ್ದವರ ವೇಳೆ ಆಡಳಿತ ಪಕ್ಷದ ವಿದ್ಯಾರ್ಥಿ ಕಾರ್ಯಕರ್ತರು ಬಡಿಗೆ, ಕಲ್ಲು, ಭರ್ಜಿ ಹಾಗೂ ಪೆಟ್ರೋಲ್ ತುಂಬಿದ ಬಾಟಲ್‌ಗಳನ್ನು ಎಸೆದು ದಾಳಿ ನಡೆಸಿದರು ಎಂದು ಪ್ರತಿಭಟನಕಾರರು ತಿಳಿಸಿದರು.
ಈ ವೇಳೆ ಹಿಂಸಾಚಾರವು ತೀವ್ರ ಸ್ವರೂಪಕ್ಕೆ ತಿರುಗಿತು. ಘಟನೆ ಬಳಿಕ ಗಾಯಗೊಂಡ 297 ಮಂದಿಯನ್ನು ಢಾಕಾ ವೈದ್ಯಕೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ್ದು, 12 ಮಂದಿ ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸ್ ಇನ್‌ಸ್ಪೆಕ್ಟರ್ ಬಚ್ಚು ಮಿಯಾ ತಿಳಿಸಿದರು.
‘ಜಹಾಂಗೀರ್ ನಗರ ವಿಶ್ವವಿದ್ಯಾಲಯದಲ್ಲಿ ಗಾಯಗೊಂಡ 111 ಮಂದಿಯನ್ನು ವಿವಿಯ ಆವರಣದಲ್ಲಿರುವ ಕ್ಲಿನಿಕ್‌ನಲ್ಲಿ ಚಿಕಿತ್ಸೆ ನೀಡಿ, ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಯಿತು’ ಎಂದರು.
1971ರಲ್ಲಿ ಪಾಕಿಸ್ತಾನದ ವಿರುದ್ಧ ಯುದ್ಧದಲ್ಲಿ ಹೋರಾಡಿದ ಯೋಧರ ಮಕ್ಕಳು ಸೇರಿದಂತೆ ನಿರ್ದಿಷ್ಟ ಗುಂಪುಗಳಿಗೆ ಸರ್ಕಾರಿ ಉದ್ಯೋಗದ ನೇಮಕಾತಿ ವೇಳೆ ಶೇ 50ರಷ್ಟು ಮೀಸಲಾತಿ ನಿಗದಿಗೊಳಿಸಿ ಬಾಂಗ್ಲಾದೇಶ ಸರ್ಕಾರ ಆದೇಶ ಹೊರಡಿಸಿತ್ತು. ಈ ನಿರ್ಧಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ವಿದ್ಯಾರ್ಥಿ ಸಂಘಟನೆಗಳು, ‘ಅರ್ಹತೆ’ಗೆ ಅನುಗುಣವಾಗಿ ನೇಮಕಾತಿ ವ್ಯವಸ್ಥೆ ಜಾರಿಗೆ ತರಬೇಕು ಎಂದು ಆಗ್ರಹಿಸಿ ಕಳೆದೊಂದು ವಾರದಿಂದ ಪ್ರತಿಭಟನೆ ನಡೆಸುತ್ತಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.