ಢಾಕಾ: ಸರ್ಕಾರಿ ನೇಮಕಾತಿಗಳಲ್ಲಿ ಮೀಸಲಾತಿ ವಿರೋಧಿಸಿ ವಿದ್ಯಾರ್ಥಿಗಳು ಢಾಕಾ ಸೇರಿ ದೇಶದ ವಿವಿಧೆಡೆ ನಡೆಸುತ್ತಿರುವ ಪ್ರತಿಭಟನೆ ಮುಂದುವರಿದಿದೆ. ಈ ನಡುವೆ ಸುದ್ದಿ ವಾಹಿನಿಗಳು ಪ್ರಸಾರವನ್ನು ಸ್ಥಗಿತಗೊಳಿಸಿದ್ದು, ಸಂಪರ್ಕ ವ್ಯವಸ್ಥೆ ಅಸ್ತವ್ಯಸ್ತಗೊಂಡಿದೆ.
ಪ್ರತಿಭಟನೆಯಲ್ಲಿ ಸಂಭವಿಸಿದ ಹಿಂಸಾಚಾರದಲ್ಲಿ 30ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ನೂರಾರು ಮಂದಿ ಗಾಯಗೊಂಡಿದ್ದಾರೆ.
ಈ ಬಗ್ಗೆ ಸರ್ಕಾರ ಯಾವುದೇ ಹೇಳಿಕೆ ಬಿಡುಗಡೆ ಮಾಡಿಲ್ಲ. ಈ ನಡುವೆ ಕೆಲ ಸರ್ಕಾರಿ ವೆಬ್‌ಸೈಟ್‌ಗಳನ್ನು ಹ್ಯಾಕ್ ಮಾಡಿ ಪೋಸ್ಟರ್ ಕಾಣುವಂತೆ ಮಾಡಿದ್ದಾರೆ.
ದೇಶದಲ್ಲಿ ಉಲ್ಬಣಗೊಂಡ ಉದ್ವಿಗ್ನತೆಯನ್ನು ಶಾಂತಗೊಳಿಸಲು ಗುರುವಾರ ಕೆಲವು ಮೊಬೈಲ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿತ್ತು. ಪರಿಣಾಮ ಶುಕ್ರವಾರ ಬೆಳಿಗ್ಗೆ ಹೊತ್ತಿಗೆ ದೇಶದಾದ್ಯಂತ ದೂರವಾಣಿ ಕರೆ, ಇಂಟರ್‌ನೆಟ್ ಸಂಪರ್ಕ ವ್ಯವಸ್ಥೆ ಅಸ್ತವ್ಯಸ್ತಗೊಂಡಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ.
ಶುಕ್ರವಾರ ಬೆಳಿಗ್ಗೆಯಿಂದ ಬಾಂಗ್ಲಾದೇಶದ ಸುದ್ದಿವಾಹಿನಿಗಳು ಮತ್ತು ಅವುಗಳ ಸಾಮಾಜಿಕ ಮಾಧ್ಯಮಗಳು ಅಪ್ಡೇಟ್ ಆಗಿಲ್ಲ. ಮೊಬೈಲ್ ಇಂಟರ್‌ನೆಟ್ ಸೇವೆ, ಎಸ್‌ಎಂಎಸ್ ಸೇವೆ, ಬ್ರಾಡ್‌ಬ್ಯಾಂಡ್ ಸೇವೆಗಳೂ ಕಾರ್ಯ ನಿರ್ವಹಿಸುತ್ತಿಲ್ಲ. ಜತೆಗೆ ಕೆಲ ಟಿವಿ ವಾಹಿನಿಗಳು ಸುದ್ದಿ ಪ್ರಸಾರವನ್ನು ಸ್ಥಗಿತಗೊಳಿಸಿವೆ. ಆದರೆ ಮನರಂಜನಾ ವಾಹಿನಿಗಳು ಎಂದಿನಂತೆ ಪ್ರಸಾರವಾಗುತ್ತಿವೆ ಎಂದು ವರದಿಯಾಗಿದೆ.
ಪ್ರತಿಭಟನೆ ಏಕೆ?
ಬಾಂಗ್ಲಾದೇಶದಲ್ಲಿ ಪ್ರಸ್ತುತ ಕೋಟಾ ವ್ಯವಸ್ಥೆ ಪ್ರಕಾರ, ಸರ್ಕಾರಿ ಉದ್ಯೋಗಗಳಲ್ಲಿನ ಶೇ 56ರಷ್ಟನ್ನು ಕಾಯ್ದಿರಿಸಲಾಗಿದೆ. ಇದರಲ್ಲಿ 1971ರ ವಿಮೋಚನಾ ಸ್ವಾತಂತ್ರ್ಯ ಯುದ್ಧದ ಹೋರಾಟಗಾರರ ಕುಟುಂಬದವರಿಗೆ ಶೇ 30, ಹಿಂದುಳಿದ ಜಿಲ್ಲೆಗಳಿಗೆ ಶೇ 10, ಮಹಿಳೆಯರಿಗೆ ಶೇ 10, ಜನಾಂಗೀಯ ಅಲ್ಪಸಂಖ್ಯಾತರಿಗೆ ಶೇ 5 ಹಾಗೂ ಅಂಗವಿಕಲರಿಗೆ ಶೇ 1ರಷ್ಟು ಮೀಸಲಾತಿ ಕಲ್ಪಿಸಲಾಗಿದೆ. ವಿಮೋಚನಾ ಹೋರಾಟದ ಕುಟುಂಬದವರಿಗೆ ಕಲ್ಪಿಸಿರುವ ಶೇ 30ರಷ್ಟು ಮೀಸಲಾತಿಯನ್ನು ರದ್ದುಪಡಿಸಬೇಕು ಎಂಬುದು ಪ್ರತಿಭಟನಾಕಾರರ ಆಗ್ರಹ. ಈ ಬೇಡಿಕೆಗಳನ್ನು ಪ್ರಧಾನಿ ಶೇಖ್ ಹಸೀನಾ ತಿರಸ್ಕರಿಸಿದ್ದರಿಂದ ಪ್ರತಿಭಟನೆ ತೀವ್ರಗೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.