ಡಾಕಾ: ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿಯ ಹಿನ್ನೆಲೆಯಲ್ಲಿ ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಹಿಂಸಾಚಾರ ಭಾನುವಾರ ಮತ್ತಷ್ಟು ವ್ಯಾಪಿಸಿದೆ. ಪ್ರಬಲ ಇಸ್ಲಾಮಿಕ್ ಗುಂಪಿನ ನೂರಾರು ಸದಸ್ಯರು ಭಾನುವಾರ ಪೂರ್ವ ಬಾಂಗ್ಲಾದೇಶದ ಹಿಂದೂ ದೇವಾಲಯಗಳು ಮತ್ತು ರೈಲಿನ ಮೇಲೆ ದಾಳಿ ಮಾಡಿದ್ದಾರೆ ಎಂದು ಪೊಲೀಸರು ಮತ್ತು ಸ್ಥಳೀಯ ಪತ್ರಕರ್ತ ತಿಳಿಸಿದ್ದಾರೆ.
ಮೋದಿ ಭೇಟಿಯ ವಿರುದ್ಧ ಇಸ್ಲಾಮಿಕ್ ಗುಂಪುಗಳು ಆಯೋಜಿಸಿದ್ದ ಪ್ರತಿಭಟನೆ ವೇಳೆ ಪೊಲೀಸರೊಂದಿಗೆ ನಡೆದ ಘರ್ಷಣೆಯಲ್ಲಿ ಈ ವರೆಗೆ ಕನಿಷ್ಠ 10 ಮಂದಿ ಮೃತಪಟ್ಟಿದ್ದಾರೆ. ಇದಿಷ್ಟೇ ಅಲ್ಲದೆ, ಭಾರತದ ಪ್ರಧಾನಿ ನಿರ್ಗಮನದ ನಂತರ ಹಿಂಸಾಚಾರ ಹೆಚ್ಚಾಗಿವೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ.
ಬಾಂಗ್ಲಾದೇಶದ 50 ನೇ ಸಂಸ್ಥಾಪನಾ ದಿನದಲ್ಲಿ ಭಾಗವಹಿಸಲು ನರೇಂದ್ರ ಮೋದಿ ಅವರು ಶುಕ್ರವಾರ ಡಾಕಾಕ್ಕೆ ಆಗಮಿಸಿದರು. ಬಾಂಗ್ಲಾದೇಶಕ್ಕೆ 12 ಲಕ್ಷ ಕೋವಿಡ್ ಲಸಿಕೆ ನೀಡುವುದಾಗಿ ಪ್ರಧಾನಿ ಶೇಖ್ ಹಸೀನಾ ಅವರಿಗೆ ಭರವಸೆ ನೀಡಿದ್ದ ನರೇಂದ್ರ ಮೋದಿ ಅವರು, ಶನಿವಾರ ಅಲ್ಲಿಂದ ನಿರ್ಗಮಿಸಿದ್ದರು.
'ಹಿಂದೂ ಬಹುಸಂಖ್ಯಾತ ಭಾರತದಲ್ಲಿ ಅಲ್ಪಸಂಖ್ಯಾತ ಮುಸ್ಲಿಮರ ವಿರುದ್ಧ ಮೋದಿ ತಾರತಮ್ಯ ಮಾಡುತ್ತಿದ್ದಾರೆ,' ಎಂದು ಆರೋಪಿಸಿ ಇಸ್ಲಾಮಿಕ್ ಗುಂಪುಗಳು ಶುಕ್ರವಾರದಿಂದಲೂ ಪ್ರತಿಭಟನೆ, ಹಿಂಸಾಚಾರದಲ್ಲಿ ತೊಡಗಿವೆ.
ಶುಕ್ರವಾರ ನಡೆದ ಪ್ರತಿಭಟನೆಯ ವೇಳೆ ಪೊಲೀಸರು ಅಶ್ರುವಾಯು ಮತ್ತು ರಬ್ಬರ್ ಗುಂಡುಗಳನ್ನು ಹಾರಿಸಿದ್ದರಿಂದ ಡಾಕಾದಲ್ಲಿ ಹತ್ತಾರು ಮಂದಿ ಗಾಯಗೊಂಡಿದ್ದರು. ಇದಾದ ಮರುದಿನ ಇಸ್ಲಾಮಿಕ್ ಗುಂಪಿನ ಕಾರ್ಯಕರ್ತರು ಚಿತ್ತಗಾಂಗ್ ಮತ್ತು ಡಾಕಾದ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು.
ಭಾನುವಾರ, ಹೆಫಜತ್-ಎ-ಇಸ್ಲಾಂ ಗುಂಪಿನ ಕಾರ್ಯಕರ್ತರು ಪೂರ್ವ ಬಾಂಗ್ಲಾದೇಶದ ಜಿಲ್ಲೆ ಬ್ರಹ್ಮನ್‌ಬರಿಯಾದಲ್ಲಿ ರೈಲಿನ ಮೇಲೆ ದಾಳಿ ನಡೆಸಿದರು, ಇದರಿಂದಾಗಿ ಹತ್ತು ಜನರು ಗಾಯಗೊಂಡರು.
'ಪ್ರತಿಭಟನಾಕಾರರು ರೈಲಿನ ಮೇಲೆ ದಾಳಿ ಮಾಡಿದರು. ಅದರ ಎಂಜಿನ್, ಬೋಗಿಗಳನ್ನು ಹಾನಿಗೊಳಿಸಿದರು' ಎಂದು ಪೊಲೀಸ್ ಅಧಿಕಾರಿಯೊಬ್ಬರು ಸುದ್ದಿಸಂಸ್ಥೆ ರಾಯಿಟರ್ಸ್‌ಗೆ ತಿಳಿಸಿದರು.
'ಬ್ರಹ್ಮನ್‌ಬರಿಯಾ ಹೊತ್ತಿ ಉರಿಯುತ್ತಿದೆ. ವಿವಿಧ ಸರ್ಕಾರಿ ಕಚೇರಿಗಳಿಗೆ ನಿರ್ದಾಕ್ಷಿಣ್ಯವಾಗಿ ಬೆಂಕಿ ಹಚ್ಚಲಾಗಿದೆ. ಪ್ರೆಸ್ ಕ್ಲಬ್‌ನ ಮೇಲೂ ದಾಳಿ ನಡೆದಿದೆ. ಪ್ರೆಸ್ ಕ್ಲಬ್ ಅಧ್ಯಕ್ಷರು ಸೇರಿದಂತೆ ಅನೇಕರು ಗಾಯಗೊಂಡಿದ್ದಾರೆ. ನಾವು ತೀವ್ರ ಭಯದಲ್ಲಿದ್ದೇವೆ, ಅಸಹಾಯಕರಾಗಿದ್ದೇವೆ. ಪಟ್ಟಣದ ಹಲವಾರು ಹಿಂದೂ ದೇವಾಲಯಗಳ ಮೇಲೂ ದಾಳಿ ನಡೆಸಲಾಗಿದೆ' ಎಂದು ಬ್ರಹ್ಮನ್‌ಬರಿಯಾ ಪಟ್ಟಣದ ಪತ್ರಕರ್ತ ಜಾವೇದ್ ರಹೀಮ್ ರಾಯಿಟರ್ಸ್‌ಗೆ ತಿಳಿಸಿದ್ದಾರೆ.
ಇಸ್ಲಾಮಿಕ್ ಗುಂಪಿನ ಕಾರ್ಯಕರ್ತರು ಭಾನುವಾರ ಪಶ್ಚಿಮ ಬಾಂಗ್ಲಾದೇಶದ ರಾಜ್‌ಶಾಹಿ ಜಿಲ್ಲೆಯಲ್ಲಿ ಎರಡು ಬಸ್‌ಗಳನ್ನು ಸುಟ್ಟುಹಾಕಿದ್ದಾರೆ ಎನ್ನಲಾಗಿದೆ. ನಾರಾಯಣ್‌ಗಂಜ್ ಎಂಬಲ್ಲಿ ನೂರಾರು ಪ್ರತಿಭಟನಾಕಾರರು ಪೊಲೀಸರೊಂದಿಗೆ ಘರ್ಷಣೆ ನಡೆಸಿ, ಕಲ್ಲು ತೂರಾಟ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೋದಿಯ ಭೇಟಿಯಿಂದಾಗಿ ಪ್ರತಿಭಟನೆಗಳು ಉಂಟಾಗಿದ್ದವು. ಪ್ರತಿಭಟನೆಗಳನ್ನು ಹತ್ತಿಕ್ಕಲು ಪೊಲೀಸರು ಕೈಗೊಂಡ ಕ್ರಮದಿಂದಾಗಿ ಹತ್ಯೆಗಳಾದವು. ಪೊಲೀಸರ ನಡೆಯು ವ್ಯಾಪಕ ಹಿಂಸಾಚಾರಕ್ಕೆ ಕಾರಣವಾಗಿದೆ. ಹೆಫಜತ್-ಇ-ಇಸ್ಲಾಂ ಸಂಘಟನೆ ಭಾನುವಾರ ರಾಷ್ಟ್ರವ್ಯಾಪಿ ಮುಷ್ಕರ ನಡೆಸಿದೆ.
'ನಮ್ಮ ಕಾರ್ಯಕರ್ತರ ಮೇಲೆ ಪೊಲೀಸರು ಗುಂಡು ಹಾರಿಸಿದ್ದಾರೆ' ಎಂದು ಹೆಫಜತ್-ಇ-ಇಸ್ಲಾಂನ ಸಂಘಟನಾ ಕಾರ್ಯದರ್ಶಿ ಅಜೀಜುಲ್ ಹಕ್ ಅವರು ಚಿತ್ತಗಾಂಗ್‌ನಲ್ಲಿ ಶನಿವಾರ ನಡೆದ ಸಮಾವೇಶದಲ್ಲಿ ತಿಳಿಸಿದರು. "ನಾವು ನಮ್ಮ ಸಹೋದರರ ಬಲಿದಾನವನ್ನು ವ್ಯರ್ಥವಾಗಲು ಬಿಡುವುದಿಲ್ಲ,' ಎಂದೂ ಅವರು ಹೇಳಿದ್ದಾರೆ. ಈ ಮೂಲಕ ಹಿಂಸಾಚಾರ ಮತ್ತಷ್ಟು ವ್ಯಾಪಕವಾಗುವ ಮುನ್ಸೂಚನೆ ನೀಡಿದ್ದಾರೆ.
ಇದನ್ನೂ ಓದಿ:ಐದು ಒಪ್ಪಂದಗಳಿಗೆ ಭಾರತ–ಬಾಂಗ್ಲಾ ಸಹಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.