ADVERTISEMENT

ಅಲ್ಪಸಂಖ್ಯಾತರ ಮೇಲಿನ ದಾಳಿ ಮಾಡಿದವರ ವಿರುದ್ಧ ಕಠಿಣ ಕ್ರಮ: ಬಾಂಗ್ಲಾದೇಶ

ಪಿಟಿಐ
Published 16 ಆಗಸ್ಟ್ 2024, 14:33 IST
Last Updated 16 ಆಗಸ್ಟ್ 2024, 14:33 IST
<div class="paragraphs"><p>ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಖಂಡಿಸಿ ‘ನಾರಿ ಶಕ್ತಿ’ ಸಂಘಟನೆ ವತಿಯಿಂದ&nbsp;ನವದೆಹಲಿಯಲ್ಲಿ ಶುಕ್ರವಾರ ಪ್ರತಿಭಟನೆ ನಡೆಯಿತು </p></div>

ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಖಂಡಿಸಿ ‘ನಾರಿ ಶಕ್ತಿ’ ಸಂಘಟನೆ ವತಿಯಿಂದ ನವದೆಹಲಿಯಲ್ಲಿ ಶುಕ್ರವಾರ ಪ್ರತಿಭಟನೆ ನಡೆಯಿತು

   

–ಪಿಟಿಐ ಚಿತ್ರ

ಢಾಕಾ: ದೇಶದಲ್ಲಿ ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ ಎಸಗುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಬಾಂಗ್ಲಾದೇಶ ಗೃಹ ವ್ಯವಹಾರಗಳ ಸಚಿವಾಲಯದ ನೂತನ ಸಲಹೆಗಾರ ಎಂ. ಸಖಾವತ್‌ ಹುಸೇನ್‌ ಅವರು ಎಚ್ಚರಿಕೆ ನೀಡಿದ್ದಾರೆ.

ADVERTISEMENT

ಬಾಂಗ್ಲಾದೇಶದ ‘ಇಸ್ಕಾನ್‌’ ನಿಯೋಗದೊಂದಿಗೆ ತಮ್ಮ ಕಚೇರಿಯಲ್ಲಿ ಸಖಾವತ್‌ ಸಭೆ ನಡೆಸಿದ್ದಾರೆ. ಈ ವೇಳೆ ‘ದೇಶದಲ್ಲಿ ಹಿಂಸೆ, ಸಂಘರ್ಷ ಮತ್ತು ದ್ವೇಷಕ್ಕೆ ಜಾಗವಿಲ್ಲ’ ಎಂದು ಒತ್ತಿ ಹೇಳಿದ್ದಾರೆ ಎಂದು ‘ಢಾಕಾ ಟ್ರಿಬ್ಯೂನ್‌’ ಪತ್ರಿಕೆ ವರದಿ ಮಾಡಿದೆ. 

ಸಭೆಯಲ್ಲಿ ಸಖಾವತ್‌, ‘ಬಾಂಗ್ಲಾದೇಶವು ಕೋಮುಸೌಹಾರ್ದವುಳ್ಳ ದೇಶವಾಗಿದ್ದು ಎಲ್ಲಾ ಧರ್ಮಗಳ ಜನರು ಒಟ್ಟಿಗೆ ಜೀವನ ನಡೆಸಿಕೊಂಡು ಬಂದಿದ್ದಾರೆ. ದೇಶವು ಶಾಂತಿಯ ಮೇಲೆ ನಂಬಿಕೆಯಿರಿಸಿದೆ. ಅಲ್ಪಸಂಖ್ಯಾತರ ಮೇಲೆ ಹಲ್ಲೆ, ದೌರ್ಜನ್ಯ ನಡೆಸುವ ಯಾರನ್ನೂ ಬಿಡುವುದಿಲ್ಲ, ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದ್ದಾರೆ. 

ಈ ವೇಳೆ ಇಸ್ಕಾನ್‌ ಅಧ್ಯಕ್ಷ ಸತ್ಯರಂಜನ್‌ ಬರೋಯಿ ಅವರು, ಅಲ್ಪಸಂಖ್ಯಾತರ ಸುರಕ್ಷತೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು. ಅಲ್ಪಸಂಖ್ಯಾತರ ಸುರಕ್ಷತೆ ಖಾತರಿಪಡಿಸಿಕೊಳ್ಳಲು ಕಾನೂನುಗಳ ಜಾರಿ, ಮೇಲ್ವಿಚಾರಣಾ ಸೆಲ್‌ಗಳ ಸ್ಥಾಪನೆ, ಅಲ್ಪಸಂಖ್ಯಾತರ ಆಯೋಗ ರಚನೆ ಮತ್ತು ದೇವಸ್ಥಾನಗಳಿಗೆ ನಿರಂತರ ಭದ್ರತೆ ಒದಗಿಸುವುದು ಸೇರಿದಂತೆ ಒಟ್ಟು 8 ಪ್ರಸ್ತಾಪಗಳನ್ನು ಇದೇ ವೇಳೆ ಮುಂದಿಟ್ಟರು. 

ಸಖಾವತ್ ಅವರು ಇದಕ್ಕೆ ತಮ್ಮ ಸಂಪೂರ್ಣ ಬೆಂಬಲ ಮತ್ತು ಭರವಸೆಯನ್ನು ನೀಡಿದರು. ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ಆಕ್ರಮಣ ನಡೆಯುತ್ತಿದೆ ಎಂದು ರಾಷ್ಟ್ರೀಯ ಹಿಂದೂ ಒಕ್ಕೂಟವು ಕಳವಳ ವ್ಯಕ್ತಪಡಿಸಿತು. 

ರಕ್ಷಣೆ ಭರವಸೆ (ನವದೆಹಲಿ ವರದಿ): ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಮುಖ್ಯಸ್ಥ ಮೊಹಮ್ಮದ್ ಯೂನಸ್ ಅವರು ಶುಕ್ರವಾರ, ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕರೆ ಮಾಡಿ ಮಾತನಾಡಿದ್ದಾರೆ. ತಮ್ಮ ದೇಶದಲ್ಲಿ ಹಿಂದೂಗಳು ಮತ್ತು ಇತರ ಎಲ್ಲ ಅಲ್ಪಸಂಖ್ಯಾತರಿಗೆ ಸೂಕ್ತ ರಕ್ಷಣೆ ಒದಗಿಸುವ ಭರವಸೆಯನ್ನು ಅವರು ಈ ವೇಳೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.