ಢಾಕಾ: ‘ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಕ್ ಹಸೀನಾ ಸೇರಿ ಎಲ್ಲ ಆರೋಪಿಗಳನ್ನು ದೇಶಕ್ಕೆ ವಾಪಸ್ ಕರೆಸಿಕೊಳ್ಳಲು ಇಂಟರ್‌ಪೋಲ್ ಮುಖಾಂತರ ರೆಡ್ ಕಾರ್ನರ್ ನೋಟಿಸ್ ಜಾರಿಗೊಳಿಸಲು ಕ್ರಮ ಕೈಗೊಳ್ಳುವಂತೆ ಬಾಂಗ್ಲಾದೇಶದ ಅಂತರರಾಷ್ಟ್ರೀಯ ಅಪರಾಧಗಳ ನ್ಯಾಯಮಂಡಳಿ (ಐಸಿಟಿ) ಮುಖ್ಯ ಪ್ರಾಸಿಕ್ಯೂಟರ್ ಎಂ.ಡಿ.ತಾಜುಲ್ ಇಸ್ಲಾಂ ಅವರು ಐಜಿಪಿ ಎಂ.ಡಿ.ಮೊಯ್ನಿಲ್ ಇಸ್ಲಾಂ ಅವರಿಗೆ ಪತ್ರ ಬರೆದಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.
ಹಸೀನಾ ಸೇರಿ ಇತರೆ ಆರೋಪಿಗಳನ್ನು ದೇಶಕ್ಕೆ ಕರೆಸಲು ಇಂಟರ್‌ಪೋಲ್ ನೆರವು ಪಡೆಯಲಾಗುವುದು ಎಂದು ಕಾನೂನು ಸಚಿವಾಲಯದ ಸಲಹೆಗಾರ ಆಸಿಫ್ ನಜ್ರುಲ್ ಹೇಳಿಕೆ ನೀಡಿದ ಎರಡು ದಿನಗಳಲ್ಲೇ ಈ ಬೆಳವಣಿಗೆ ನಡೆದಿದೆ ಎಂದು ಬಾಂಗ್ಲಾದ ದೈನಿಕ ‘ಪ್ರೊಥೊಮ್ ಅಲೊ’ ವರದಿ ಮಾಡಿದೆ.
ಹಸೀನಾ ಅವರ ಸರ್ಕಾರದ ವಿರುದ್ಧ ವಿದ್ಯಾರ್ಥಿಗಳು ದೇಶದಾದ್ಯಂತ ಪ್ರತಿಭಟನೆ ನಡೆಸಿದ್ದರು. ಈ ವೇಳೆ ಸುಮಾರು 753 ಜನರು ಮೃತಪಟ್ಟು, ಸಾವಿರಾರು ಮಂದಿ ಗಾಯಗೊಂಡಿದ್ದರು. ಈ ಕ್ರಮವನ್ನು ದೇಶದ ಜನರ ಮೇಲೆ ನಡೆಸಿದ ನರಮೇಧ ಎಂದು ಮಧ್ಯಂತರ ಸರ್ಕಾರ ಹೇಳಿತ್ತು.
ಪ್ರತಿಭಟನಕಾರರ ಮೇಲೆ ದಾಳಿ ನಡೆಸುವಂತೆ ಹಸೀನಾ ಅವರು ಆದೇಶ ಹೊರಡಿಸಿದ್ದರು ಎನ್ನುವ ಆರೋಪವೂ ಸೇರಿ ಹಸೀನಾ ಹಾಗೂ ಅವರ ಪಕ್ಷದ ನಾಯಕರ ಮೇಲೆ ಸುಮಾರು 60 ದೂರುಗಳು ದಾಖಲಾಗಿವೆ. ಈ ಪ್ರಕರಣಗಳ ವಿಚಾರಣೆಗಾಗಿ ಹಸೀನಾ ಸೇರಿ ಇತರರನ್ನು ದೇಶಕ್ಕೆ ವಾಪಸ್ ಕರೆಸಿಕೊಳ್ಳಲು ಮಧ್ಯಂತರ ಸರ್ಕಾರ ಮುಂದಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.