ADVERTISEMENT

Bangla Unrest | ಸೇನೆಗೆ ‘ನ್ಯಾಯಾಧೀಶರ ಅಧಿಕಾರ’ ನೀಡಿದ ಬಾಂಗ್ಲಾ ಸರ್ಕಾರ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2024, 15:22 IST
Last Updated 18 ಸೆಪ್ಟೆಂಬರ್ 2024, 15:22 IST
.
.   

ಢಾಕಾ: ಬಾಂಗ್ಲಾದೇಶದಲ್ಲಿ ಕಾನೂನು ಸುವ್ಯವಸ್ಥೆ ಸುಧಾರಿಸಲು ಮತ್ತು ವಿಧ್ವಂಸಕ ಚಟುವಟಿಕೆಗಳನ್ನು ತಡೆಯಲು ಮಧ್ಯಂತರ ಸರ್ಕಾರವು ದೇಶದ ಸೇನೆಗೆ ಎರಡು ತಿಂಗಳ ಅವಧಿಗೆ ಮ್ಯಾಜಿಸ್ಟೀರಿಯಲ್‌ ಅಧಿಕಾರವನ್ನು (ನ್ಯಾಯಾಧೀಶರಿಗೆ ಇರುವ ಅಧಿಕಾರ) ನೀಡಿದೆ.

ಸರ್ಕಾರದ ನಿರ್ಣಯದ ಬಗ್ಗೆ ಸಾರ್ವಜನಿಕ ಆಡಳಿತ ಸಚಿವಾಲಯವು ಮಂಗಳವಾರ ಪ್ರಕಟಣೆ ಹೊರಡಿಸಿ, ತತ್‌ಕ್ಷಣದಿಂದಲೇ ಇದು ಜಾರಿಯಾಗಲಿದೆ ಎಂದು ತಿಳಿಸಿದೆ.

ಸೇನೆಯ ಕಮಿಷನ್ಡ್ ಅಧಿಕಾರಿಗಳು ಈ ವಿಶೇಷ ಅಧಿಕಾರವನ್ನು ಹೊಂದಿರುತ್ತಾರೆ. ಈ ಆದೇಶವು ಮುಂದಿನ 60 ದಿನಗಳ ಕಾಲ ಚಾಲ್ತಿಯಲ್ಲಿರುತ್ತದೆ ಎಂದು ಹೇಳಿದೆ.

ADVERTISEMENT

ನ್ಯಾಯಾಧೀಶರಿಗೆ ಇರುವ ಅಧಿಕಾರವನ್ನು ಅಪರಾಧ ಪ್ರಕ್ರಿಯಾ ಸಂಹಿತೆಯ ಸೆಕ್ಷನ್‌ 17ರ ಅಡಿಯಲ್ಲಿ ಸೇನೆಯ ಅಧಿಕಾರಿಗಳಿಗೆ ನೀಡಲಾಗಿದೆ. ಇವರು ಜಿಲ್ಲಾಧಿಕಾರಿಗಳ ಅಧೀನದಲ್ಲಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಬಿಡಿನ್ಯೂಸ್‌ 24.ಕಾಂ ವರದಿ ಮಾಡಿದೆ.

ಸ್ವಯಂ ರಕ್ಷಣೆ ಮತ್ತು ತೀರಾ ಅಗತ್ಯ ಬಿದ್ದಾಗ ಅಧಿಕಾರಿಯು ಗುಂಡಿನ ದಾಳಿ ನಡೆಸಬಹುದು ಎಂದು ಮಂಧ್ಯಂತರ ಸರ್ಕಾರದ ಸಲಹೆಗಾರರೊಬ್ಬರು ತಿಳಿಸಿದರು ಎಂದು ಡೈಲಿ ಸ್ಟಾರ್‌ ದಿನಪತ್ರಿಕೆ ವರದಿ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.