ಢಾಕಾ: ‘ಬಾಂಗ್ಲಾದೇಶದ ಹಂಗಾಮಿ ಸರ್ಕಾರದ ಮುಖ್ಯ ಸಲಹೆಗಾರರಾಗಿ ನೊಬೆಲ್ ಪುರಸ್ಕೃತ ಮುಹಮ್ಮದ್ ಯೂನಸ್ ಅವರನ್ನು ನೇಮಕ ಮಾಡಬೇಕು’ ಎಂದು ‘ತಾರತಮ್ಯ ವಿರೋಧಿ ವಿದ್ಯಾರ್ಥಿ ಚಳವಳಿ’ಯ ನಾಯಕರು ಆಗ್ರಹಿಸಿದ್ದಾರೆ.
ಮೀಸಲಾತಿ ವಿರುದ್ಧದ ಪ್ರತಿಭಟನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ನಹೀದ್ ಇಸ್ಲಾಂ ಅವರು ಈ ಕುರಿತಂತೆ ಸಾಮಾಜಿಕ ಮಾಧ್ಯಮದಲ್ಲಿ ಹೇಳಿಕೆ ನೀಡಿದ್ದಾರೆ. ‘ಹಂಗಾಮಿ ಸರ್ಕಾರದಲ್ಲಿ ಮುಖ್ಯ ಸಲಹೆಗಾರರಾಗಿ ಜವಾಬ್ದಾರಿ ವಹಿಸಿಕೊಳ್ಳುವಂತೆ ಯೂನಸ್ ಅವರ ಬಳಿ ಚರ್ಚಿಸಿದ್ದೇವೆ. ನಮ್ಮ ಮನವಿಗೆ ಅವರು ಒಪ್ಪಿಗೆ ನೀಡಿದ್ದಾರೆ’ ಎಂದು ಹೇಳಿದರು.
‘ಯೂನುಸ್ ಅವರ ನೇತೃತ್ವದಲ್ಲಿ ಹಂಗಾಮಿ ಸರ್ಕಾರ ರಚಿಸಬೇಕೆಂದು ನಾವು ಬಯಸುತ್ತೇವೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿರುವ, ಎಲ್ಲರನ್ನೂ ಸಮಾನವಾಗಿ ಕಾಣುವ ವ್ಯಕ್ತಿತ್ವದ ಯೂನಸ್ ಅವರು ಹಂಗಾಮಿ ಸರ್ಕಾರದ ಮುಖ್ಯ ಸಲಹೆಗಾರರಾಗಬೇಕು’ ಎಂದು ತಿಳಿಸಿದರು.
ಹಂಗಾಮಿ ಸರ್ಕಾರದ ಇತರ ಸದಸ್ಯರ ಹೆಸರನ್ನು ಕೂಡಲೇ ಘೋಷಿಸಲಾಗುತ್ತದೆ ಎಂದು ಇದೇ ವೇಳೆ ಹೇಳಿದರು.
ಸಂಸತ್ ವಿಸರ್ಜಿಸಿ ಆದಷ್ಟು ಬೇಗ ಹಂಗಾಮಿ ಸರ್ಕಾರವನ್ನು ರಚಿಸಲಾಗುವುದು ಎಂದು ಅಧ್ಯಕ್ಷ ಮೊಹಮ್ಮದ್ ಶಹಾಬುದ್ದೀನ್ ಘೋಷಿಸಿದ ಬೆನ್ನಲ್ಲೇ ಈ ಹೇಳಿಕೆ ಹೊರಬಿದ್ದಿದೆ.
ಸಣ್ಣ ಸಾಲ ಪರಿಕಲ್ಪನೆಯ ಮೂಲಕ ವಿಶ್ವದಲ್ಲಿ ‘ಮೈಕ್ರೊ ಕ್ರೆಡಿಟ್’ ಮತ್ತು ‘ಮೈಕ್ರೊ ಫೈನಾನ್ಸ್’ ಎಂಬ ಆರ್ಥಿಕ ವ್ಯವಸ್ಥೆಗೆ ಬಲ ತಂದಿರುವ ಬಾಂಗ್ಲಾದೇಶದ ಗ್ರಾಮೀಣ ಬ್ಯಾಂಕಿನ ಸಂಸ್ಥಾಪಕ ಮುಹಮ್ಮದ್ ಯೂನಸ್, ‘ಬಡವರ ಬ್ಯಾಂಕರ್’ ಎಂದೇ ಗುರುತಿಸಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.