ADVERTISEMENT

ಕೆನಡಾ: ಹಿಂದೂ ದೇಗುಲಕ್ಕೆ ಹಾನಿ, ಭಾರತ ವಿರೋಧಿ ಬರಹ

ಪಿಟಿಐ
Published 23 ಜುಲೈ 2024, 13:24 IST
Last Updated 23 ಜುಲೈ 2024, 13:24 IST
..
..   

ಒಟ್ಟಾವ: ಕೆನಡಾದಲ್ಲಿರುವ ಬಿಎಪಿಎಸ್‌ ಸ್ವಾಮಿನಾರಾಯಣ ಮಂದಿರಕ್ಕೆ ಹಾನಿಯನ್ನುಂಟು ಮಾಡಿದ್ದು, ದುಷ್ಕರ್ಮಿಗಳು ಗೋಡೆಗಳ ಮೇಲೆ ದ್ವೇಷಪೂರಿತ ಮತ್ತು ಭಾರತ ವಿರೋಧಿ ಬರಹಗಳನ್ನು ಬರೆದಿದ್ದಾರೆ.

‘ಎಡ್ಮಂಟನ್‌ ನಗರದಲ್ಲಿರುವ ಸ್ವಾಮಿನಾರಾಯಣ ಮಂದಿರವನ್ನು ಸೋಮವಾರ ಮುಂಜಾನೆ ಹಾನಿಗೊಳಿಸಿದ್ದು, ಇದನ್ನು ನಾವು ಖಂಡಿಸುತ್ತೇವೆ. ಕೆನಡಾ ಅಧಿಕಾರಿಗಳು ಈ ಬಗ್ಗೆ ತನಿಖೆ ನಡೆಸಿ, ದುಷ್ಕರ್ಮಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಕೆನಡಾದ ವ್ಯಾಂಕೋವರ್‌ನಲ್ಲಿರುವ ಭಾರತದ ಕಾನ್ಸುಲೇಟ್‌ ಜನರಲ್ ‘ಎಕ್ಸ್’ನಲ್ಲಿ ತಿಳಿಸಿದ್ದಾರೆ.

ದೇಗುಲದ ಆಡಳಿತ ನಡೆಸುತ್ತಿರುವ ಬಿಎಪಿಎಸ್‌– ಬೋಚಾಸನವಾಸಿ ಅಕ್ಷರ ಪುರುಷೋತ್ತಮಸ್ವಾಮಿ ನಾರಾಯಣ ಸಂಸ್ಥೆಯು ಈ ಬಗ್ಗೆ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ. ಆರೋಪಿಗಳ ವಿರುದ್ಧ ಕ್ರಮಕೈಗೊಂಡಿರುವ ಬಗ್ಗೆಯೂ ಯಾವುದೇ ವರದಿಯಾಗಿಲ್ಲ.

ADVERTISEMENT

‘ಈ ಘಟನೆಯು ಕೇವಲ ದೇಗುಲದ ಮೇಲಿನ ದಾಳಿಯಲ್ಲ, ಹಿಂದೂ ಸಮುದಾಯದ ನಂಬಿಕೆ ಮತ್ತು ಭಾವನೆಗಳ ಮೇಲಿನ ದಾಳಿ. ಕೆನಡಾದಲ್ಲಿನ ಹಿಂದೂ ವಿರೋಧಿ ಮನಸ್ಥಿತಿಯನ್ನು ಖಂಡಿಸುತ್ತೇವೆ’ ಎಂದು ಕೆನಡಾದ ಹಿಂದೂ ಚೇಂಬರ್‌ ಆಫ್‌ ಕಾಮರ್ಸ್‌ ತಿಳಿಸಿದೆ.

‘ದೇಗುಲದ ಗೋಡೆಯ ಮೇಲೆ ಬಣ್ಣಗಳಿಂದ ದ್ವೇಷಪೂರಿತ ಬರಹಗಳನ್ನು ಬರೆಯಲಾಗಿದೆ. ಕೆನಡಾದಲ್ಲಿ ಭಯದ ವಾತಾವರಣವಿಲ್ಲ. ಈ ಘಟನೆಯು ನಗರದ ಮೌಲ್ಯಗಳಿಗೆ ವಿರುದ್ಧವಾಗಿದೆ’ ಎಂದು ಸಂಸದ ರಂಡಿ ಬಾಯ್ಸೋನಾಲ್ಟ್‌ ಅವರು ತಿಳಿಸಿದ್ದಾರೆ.

ಕೆನಡಾದ ಹಲವು ಸಂಸದರು ಈ ಕೃತ್ಯವನ್ನು ಖಂಡಿಸಿದ್ದಾರೆ. ಕೆನಡಾದಲ್ಲಿ ಕಳೆದ ವರ್ಷ ಮೂರು ದೇಗುಲಗಳನ್ನು ದುಷ್ಕರ್ಮಿಗಳು ಧ್ವಂಸಗೊಳಿಸಿದ್ದರು. ಇದರಿಂದಾಗಿ ಕೆನಡಾದಲ್ಲಿನ ಹಿಂದೂಗಳಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.