ಅಟ್ಲಾಂಟಾ, ಅಮೆರಿಕ: ಮುಂಬರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಸಂಭವನೀಯ ಅಭ್ಯರ್ಥಿಯಾಗಿರುವ ಕಮಲಾ ಹ್ಯಾರಿಸ್ ಅವರಿಗೆ ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಮತ್ತು ಪತ್ನಿ ಮಿಷೆಲ್ ಒಬಾಮ ಅವರು ಬೆಂಬಲ ಸೂಚಿಸಿದ್ದಾರೆ.
ಹಾಲಿ ಉಪಾಧ್ಯಕ್ಷೆಯಾಗಿರುವ ಕಮಲಾ ಅವರಿಗೆ ಒಬಾಮ ದಂಪತಿಯ ಬೆಂಬಲ ನಿರೀಕ್ಷಿತವೇ ಆಗಿತ್ತು. ಆದರೂ, ಡೆಮಾಕ್ರಟಿಕ್ ಪಕ್ಷದ ಇಬ್ಬರು ಜನಪ್ರಿಯ ನಾಯಕರ ಅಧಿಕೃತ ಅನುಮೋದನೆ ದೊರೆತಿರುವುದು ಅವರ ಬಲವನ್ನು ಹೆಚ್ಚಿಸಿದೆ ಎಂದು ವಿಶ್ಲೇಷಿಸಲಾಗಿದೆ.
ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ವಿರುದ್ಧದ ಸ್ಪರ್ಧೆಯಿಂದ ಅಧ್ಯಕ್ಷ ಜೋ ಬೈಡನ್ ಹಿಂದೆ ಸರಿದ ಬಳಿಕ, ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಯಾಗಲು ಕಮಲಾ ಹೆಸರು ಮುಂಚೂಣಿಯಲ್ಲಿದೆ. ಕಮಲಾ ಅವರು ಒಬಾಮ ದಂಪತಿ ಜತೆಗಿನ ದೂರವಾಣಿ ಸಂಭಾಷಣೆಯ ವಿಡಿಯೊವನ್ನು ಶುಕ್ರವಾರ ಬೆಳಿಗ್ಗೆ ಹಂಚಿಕೊಳ್ಳುವ ಮೂಲಕ ಅವರ ಅನುಮೋದನೆ ದೊರೆತಿರುವುದನ್ನು ಘೋಷಿಸಿದ್ದಾರೆ.
ಈ ಬೆಳವಣಿಗೆಯು ಅಮೆರಿಕದ ಮೊದಲ ಕಪ್ಪುವರ್ಣೀಯ ಅಧ್ಯಕ್ಷ ಮತ್ತು ಮೊದಲ ಕಪ್ಪುವರ್ಣೀಯ ಹಾಗೂ ಏಷ್ಯಾ ಮೂಲದ ಮೊದಲ ಉಪಾಧ್ಯಕ್ಷೆ ನಡುವಿನ ಸ್ನೇಹ ಮತ್ತು ಬಾಂಧವ್ಯವನ್ನು ಎತ್ತಿತೋರಿಸಿದೆ. ಕಮಲಾ ಅವರು ಅಮೆರಿಕದ ಅಧ್ಯಕ್ಷರಾಗಿ ಚುನಾಯಿತರಾದರೆ ಈ ಸ್ಥಾನಕ್ಕೇರಿದ ಮೊದಲ ಕಪ್ಪುವರ್ಣೀಯ ಮಹಿಳೆ ಎನಿಸಲಿದ್ದಾರೆ.
‘ನಾನು ಹಾಗೂ ಮಿಷೆಲ್ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಯಾಗಿ ನಿಮ್ಮ ಹೆಸರನ್ನು ಅನುಮೋದಿಸುತ್ತೇವೆ ಎಂಬುದನ್ನು ತಿಳಿಸಲು ಕರೆ ಮಾಡಿದ್ದೇನೆ. ಚುನಾವಣೆಯಲ್ಲಿ ನಿಮ್ಮ ಗೆಲುವಿಗಾಗಿ ನಮ್ಮಿಂದ ಸಾಧ್ಯವಿರುವ ಎಲ್ಲ ಪ್ರಯತ್ನವನ್ನೂ ಮಾಡುತ್ತೇವೆ’ ಎಂದು ಒಬಾಮ ಅವರು ಕಮಲಾ ಅವರಲ್ಲಿ ಹೇಳಿದ್ದಾರೆ.
ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಯಾಗಲು ಅಗತ್ಯವಿರುವ ಪ್ರತಿನಿಧಿಗಳ ಬೆಂಬಲವನ್ನು ಹ್ಯಾರಿಸ್ ಅವರು ಈಗಾಗಲೇ ಗಿಟ್ಟಿಸಿಕೊಂಡಿದ್ದಾರೆ ಎಂದು ಸಮೀಕ್ಷೆಯೊಂದು ತಿಳಿಸಿದೆ. ಆದರೂ, ಈ ಕುರಿತ ಅಧಿಕೃತ ಘೋಷಣೆ ಮುಂದಿನ ತಿಂಗಳು ಷಿಕಾಗೊದಲ್ಲಿ ನಡೆಯಲಿರುವ ಡೆಮಾಕ್ರಟಿಕ್ ಪಕ್ಷದ ರಾಷ್ಟ್ರೀಯ ಸಮಾವೇಶದಲ್ಲಿ ಮಾಡಲಾಗುತ್ತದೆ.
ಕಮಲಾ ಹ್ಯಾರಿಸ್ ವಿರುದ್ಧ ಟ್ರಂಪ್ ಟೀಕೆ: ಡೆಮಾಕ್ರಟಿಕ್ ಪಕ್ಷದ ಸಂಭವನೀಯ ಅಭ್ಯರ್ಥಿಯಾಗಿರುವ ಕಮಲಾ ಹ್ಯಾರಿಸ್ ಅವರು ‘ಆಡಳಿತ ನಡೆಸಲು ಅಸಮರ್ಥರು’ ಎಂದು ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ 78 ವರ್ಷದ ಡೊನಾಲ್ಡ್ ಟ್ರಂಪ್ ವಾಗ್ದಾಳಿ ನಡೆಸಿದ್ದಾರೆ.
‘ಬೈಡನ್ ಅವರ ವಿನಾಶಕಾರಿ ನೀತಿಗಳನ್ನು ಕಳೆದ ಮೂರೂವರೆ ವರ್ಷಗಳಿಂದ ಬೆಂಬಲಿಸುತ್ತಾ ಬಂದಿರುವ ಕಮಲಾ ಅವರು ಅತಿರೇಕದ ಎಡಪಂಥೀಯ ವಿಚಾರಧಾರೆ ಹೊಂದಿದ್ದಾರೆ. ಅವರಿಗೆ ಅಧಿಕಾರ ಸಿಕ್ಕರೆ ನಮ್ಮ ದೇಶವನ್ನು ನಾಶ ಮಾಡುತ್ತಾರೆ. ಅದಕ್ಕೆ ಅವಕಾಶ ನೀಡಬಾರದು’ ಎಂದು ಕಿಡಿಕಾರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.