ADVERTISEMENT

ಸುನಿತಾ, ವಿಲ್ಮೋರ್‌ ಫೆಬ್ರುವರಿಯಲ್ಲಿ ಭೂಮಿಗೆ ವಾಪಸ್ ಸಾಧ್ಯತೆ: ನಾಸಾ

ಸ್ಪೇಸ್‌ ಎಕ್ಸ್‌ ಜೊತೆ ನಾಸಾ ಚರ್ಚೆ; ಐಎಸ್‌ಎಸ್‌ನಲ್ಲಿ ಉಳಿದಿರುವ ಗಗನಯಾತ್ರಿಗಳು

ರಾಯಿಟರ್ಸ್
Published 8 ಆಗಸ್ಟ್ 2024, 14:17 IST
Last Updated 8 ಆಗಸ್ಟ್ 2024, 14:17 IST
<div class="paragraphs"><p>ಗಗನ ಯಾತ್ರಿಗಳಾದ ಸುನಿತಾ ವಿಲಿಯಮ್ಸ್‌ ಮತ್ತು ಬಚ್‌ ವಿಲ್ಮೋರ್‌  </p></div>

ಗಗನ ಯಾತ್ರಿಗಳಾದ ಸುನಿತಾ ವಿಲಿಯಮ್ಸ್‌ ಮತ್ತು ಬಚ್‌ ವಿಲ್ಮೋರ್‌

   

ಪಿಟಿಐ

ವಾಷಿಂಗ್ಟನ್: ಗಗನನೌಕೆಯಲ್ಲಿ ಕಂಡುಬಂದ ತಾಂತ್ರಿಕ ದೋಷದಿಂದ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿಯೇ (ಐಎಸ್‌ಎಸ್‌) ಉಳಿದುಕೊಂಡಿರುವ ಗಗನಯಾತ್ರಿಗಳಾದ ಸುನಿತಾ ವಿಲಿಯಮ್ಸ್‌ ಹಾಗೂ ಬುಚ್‌ ವಿಲ್ಮೋರ್‌ ಅವರನ್ನು ಭೂಮಿಗೆ ಕರೆತರುವ ಕುರಿತು ಸ್ಪೇಸ್‌ಎಕ್ಸ್‌ ಜೊತೆ ನಾಸಾ ಚರ್ಚೆ ನಡೆಸುತ್ತಿದೆ.

ADVERTISEMENT

ಒಂದು ವೇಳೆ, ಬೋಯಿಂಗ್‌ನ ಸ್ಟಾರ್‌ಲೈನರ್‌ ಗಗನನೌಕೆ ಸುರಕ್ಷಿತವಲ್ಲ ಎಂದಾದಲ್ಲಿ, ಸ್ಪೇಸ್‌ಎಕ್ಸ್‌ನ ‘ಡ್ರ್ಯಾಗನ್‌’ ಗಗನನೌಕೆಯಲ್ಲಿ ಈ ಇಬ್ಬರು ಗಗನಯಾತ್ರಿಗಳನ್ನು ಮುಂದಿನ ವರ್ಷ ಫೆಬ್ರುವರಿ ವೇಳೆಗೆ ಮರಳಿ ಭೂಮಿಗೆ ಕರೆತರುವ ಯೋಜನೆ ರೂಪಿಸಲಾಗುತ್ತಿದೆ ಎಂದು ನಾಸಾ ತಿಳಿಸಿದೆ.

ಬೋಯಿಂಗ್‌ನ ಸ್ಟಾರ್‌ಲೈನರ್ ಗಗನನೌಕೆಯಲ್ಲಿ ಈ ಇಬ್ಬರು ಗಗನಯಾತ್ರಿಗಳು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳಿದ್ದಾರೆ.

ನಿಗದಿತ ಯೋಜನೆಯಂತೆ, ಎಂಟು ದಿನಗಳ ಕಾಲ ಇವರು ಬಾಹ್ಯಾಕಾಶ ನಿಲ್ದಾಣದಲ್ಲಿ ಉಳಿದುಕೊಳ್ಳುವುದಿತ್ತು. ಆದರೆ, ಸ್ಟಾರ್‌ಲೈನರ್‌ನ ಪ್ರೊಪೆಲ್ಷನ್‌ ಸಿಸ್ಟಮ್‌ನಲ್ಲಿ ಕಾಣಿಸಿಕೊಂಡ ತೊಂದರೆ ಕಾರಣ ಅವರು ಭೂಮಿಗೆ ಮರಳುವುದನ್ನು ಮುಂದೂಡಲಾಗಿದೆ.

ಇನ್ನೊಂದೆಡೆ, ಸ್ಟಾರ್‌ಲೈನರ್‌ ಈ ಗಗನಯಾತ್ರಿಗಳನ್ನು ಸುರಕ್ಷಿತವಾಗಿ ಭೂಮಿಗೆ ಕರೆದುಕೊಂಡು ಬರುವ ಸಾಮರ್ಥ್ಯ ಹೊಂದಿದೆಯೇ ಎಂಬ ಬಗ್ಗೆ ಪ್ರಶ್ನೆಗಳು ಉದ್ಭವಿಸಿವೆ. ಈ ಕಾರಣಕ್ಕಾಗಿಯೇ ಸ್ಪೇಸ್‌ಎಕ್ಸ್‌ ಸಂಸ್ಥೆಯ ‘ಡ್ರ್ಯಾಗನ್‌’ ಗಗನನೌಕೆ ಮೂಲಕ ಇವರನ್ನು ಭೂಮಿಗೆ ಕರೆತರುವ ಯೋಜನೆಯನ್ನು ಸಿದ್ಧಪಡಿಸಲಾಗುತ್ತಿದೆ.

‘ಸುನಿತಾ ವಿಲಿಯಮ್ಸ್‌ ಹಾಗೂ ಬುಚ್‌ ವಿಲ್ಮೋರ್‌ ಅವರನ್ನು ಮರಳಿ ಕರೆ ತರುವುದಕ್ಕಾಗಿ ಡ್ರ್ಯಾಗನ್‌ ನೌಕೆಯಲ್ಲಿ ಎರಡು ಸೀಟುಗಳನ್ನು ಖಾಲಿ ಬಿಡುವಂತೆ ಸ್ಪೇಸ್‌ಎಕ್ಸ್‌ ಜೊತೆ ಚರ್ಚಿಸಲಾಗುತ್ತಿದೆ’ ಎಂದು ನಾಸಾ ತಿಳಿಸಿದೆ.

‘ತನ್ನ ಗಗನಯಾತ್ರಿಗಳನ್ನು ಕರೆತರಲು ಸ್ಪೇಸ್‌ಎಕ್ಸ್‌ ನೆರವು ಪಡೆದುಕೊಳ್ಳಲು ನಾಸಾ ನಿರ್ಧರಿಸಿದಲ್ಲಿ, ನಮ್ಮ ಗಗನನೌಕೆ ಸ್ಟಾರ್‌ಲೈನರ್‌ ಅನ್ನು ಸಿಬ್ಬಂದಿರಹಿತವಾಗಿ ಮರಳಿ ತರುವುದಕ್ಕೆ ಅಗತ್ಯವಿರುವ ತಾಂತ್ರಿಕ ಬದಲಾವಣೆಗಳನ್ನು ಮಾಡಲಾಗುವುದು’ ಎಂದು ಬೋಯಿಂಗ್‌ ಸಂಸ್ಥೆ ವಕ್ತಾರ ಹೇಳಿದ್ದಾರೆ.

ಗಗನಯಾನ ಕ್ಷೇತ್ರದಲ್ಲಿ ತನ್ನ ಛಾಪು ಮೂಡಿಸುವುದಕ್ಕೆ ಸಂಬಂಧಿಸಿ ಬೋಯಿಂಗ್‌ ಸಂಸ್ಥೆ ಹಲವು ವರ್ಷಗಳಿಂದ ಸ್ಪೇಸ್‌ಎಕ್ಸ್‌ ಜೊತೆ ಪೈಪೋಟಿ ನಡೆಸುತ್ತಿದೆ. ಹೀಗಾಗಿ, ನಾಸಾ ಈ ಇಬ್ಬರು ಗಗನಯಾತ್ರಿಗಳನ್ನು ಸ್ಪೇಸ್‌ಎಕ್ಸ್‌ನ ನೆರವಿನಿಂದ ಮರಳಿ ಕರೆತಂದಲ್ಲಿ, ಅದನ್ನು ಬೋಯಿಂಗ್‌ ಪಾಲಿಗೆ ದೊಡ್ಡ ಹಿನ್ನಡೆ ಎಂದು ವಿಶ್ಲೇಷಿಸಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.