ಭುವನೇಶ್ವರ/ಕೋಲ್ಕತ್ತ: ಬಂಗಾಳ ಕೊಲ್ಲಿಯಲ್ಲಿ ಸೃಷ್ಟಿಯಾಗಿರುವ ‘ಯಸ್’ ಚಂಡಮಾರುತವು ಒಡಿಶಾದ ಭದ್ರಕ್ ಜಿಲ್ಲೆಯ ಧಾಮ್ರಬಂದರು ಸಮೀಪದಲ್ಲಿಬುಧವಾರ ಬೆಳಿಗ್ಗೆ ಭೂಪ್ರದೇಶಕ್ಕೆ ಅಪ್ಪಳಿಸಬಹುದು ಎಂದು ಅಂದಾಜಿಸಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ, ಪೂರ್ವ ಕರಾವಳಿಯಲ್ಲಿರುವ ಒಡಿಶಾ ಮತ್ತು ಪಶ್ಚಿಮ ಬಂಗಾಳದ ಲಕ್ಷಾಂತರ ಜನರನ್ನು ಸುರಕ್ಷಿತ ಪ್ರದೇಶಕ್ಕೆ ಕಳುಹಿಸಲಾಗಿದೆ.
ನೆರೆಯ ಜಾರ್ಖಂಡ್‌ಗೂ ಮುನ್ನೆಚ್ಚರಿಕೆ ನೀಡಲಾಗಿದ್ದು, ಚಂಡ ಮಾರುತದ ಪರಿಣಾಮ ಎದುರಿಸಲು ಸಿದ್ಧತೆ ನಡೆಸಲಾಗಿದೆ.
ಧಾಮ್ರ ಹಾಗೂ ಚಾಂದ್‌ಬಾಲಿ ಮಧ್ಯೆಚಂಡಮಾರುತವು ಭೂಸ್ಪರ್ಶ ಮಾಡಬಹುದು ಎಂದು ಹೇಳಲಾಗಿದೆ. ಕಡಲ ತೀರದ ಅನೇಕ ಪ್ರದೇಶಗಳಲ್ಲಿ ಈಗಾಗಲೇ ಭಾರಿ ಮಳೆ ಆರಂಭವಾಗಿದೆ. ಅದು ಮುಂದುವರಿಯಲಿದೆ. ಈ ಪ್ರದೇಶಗಳಲ್ಲಿ ಮಂಗಳವಾರ ಮಧ್ಯರಾತ್ರಿಯ ವೇಳೆಗೆ ಗಂಟೆಗೆ 80 ಕಿ.ಮೀ. ವೇಗದಲ್ಲಿ ಗಾಳಿ ಬೀಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ಮಹಾನಿರ್ದೇಶಕ ಮೃತ್ಯುಂಜಯ ಮಹಾಪಾತ್ರ ತಿಳಿಸಿದ್ದಾರೆ.
ಚಂಡಮಾರುತ ಭೂಸ್ಪರ್ಶ ಮಾಡುವುದಕ್ಕೂ ಆರುಗಂಟೆ ಮುನ್ನ ಮತ್ತು ಆರುಗಂಟೆಗಳ ನಂತರದ ಅವಧಿಯಲ್ಲಿ ಭಾರಿ ಪರಿಣಾಮ ಉಂಟುಮಾಡಲಿದೆ. ದೊಡ್ಡ ದೊಡ್ಡ ಮರಗಳು, ವಿದ್ಯುತ್ ಕಂಬಗಳು ನೆಲಕ್ಕುರುಳುವ ಅಪಾಯವಿದೆ. ಚಾಂದ್‌ಬಾಲಿ ಜಿಲ್ಲೆಯಲ್ಲಿ ಗರಿಷ್ಠ ಹಾನಿಯಾಗುವ ಸಾಧ್ಯತೆ ಇದೆ ಎಂದು ಮಹಾಪಾತ್ರ ಮುನ್ನೆಚ್ಚರಿಕೆ ನೀಡಿದ್ದಾರೆ.
ಜನರ ಸ್ಥಳಾಂತರ: ಪಶ್ಚಿಮ ಬಂಗಾಳ ಮತ್ತು ಒಡಿಶಾದ ತೀರಪ್ರದೇಶದ ಜನರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸುವ ಕೆಲಸ ಭರದಿಂದ ಸಾಗಿದೆ. ಈಗಾಗಲೇ 11 ಲಕ್ಷಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದೆ. ಚಂಡಮಾರುತವು ಭೂಮಿಗೆ ಅಪ್ಪಳಿಸುವುದಕ್ಕೂ ಮುನ್ನ ಇನ್ನಷ್ಟು ಜನರನ್ನು ಸ್ಥಳಾಂತರಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
‘ಒಂಬತ್ತು ಲಕ್ಷಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ. ರಾಜ್ಯದಲ್ಲಿ 4,000 ಆಹಾರ ಕೇಂದ್ರಗಳನ್ನು ತೆರೆಯಲಾಗಿದೆ’ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದರೆ, ಚಂಡ
ಮಾರುತ ಅಪ್ಪಳಿಸಲಿರುವ ಪ್ರದೇಶದ ಸುಮಾರು 2 ಲಕ್ಷ ನಿವಾಸಿಗಳನ್ನು ಸ್ಥಳಾಂತರಿಸಿರುವುದಾಗಿ ಒಡಿಶಾ ಸರ್ಕಾರ ಹೇಳಿದೆ.
ಎನ್‌ಡಿಆರ್‌ಎಫ್‌ನ 112 ತಂಡ: ಐದು ರಾಜ್ಯಗಳು ಹಾಗೂ ಅಂಡಮಾನ್ ನಿಕೋಬಾರ್‌ನಲ್ಲಿ ‘ಯಸ್’ ಪರಿಣಾಮ ಉಂಟಾಗಲಿದ್ದು, ಸುರಕ್ಷತೆಗಾಗಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ (ಎನ್‌ಡಿಆರ್‌ಎಫ್) 112 ತುಕಡಿಗಳನ್ನು ನಿಯೋಜಿಸಲಾಗಿದೆ. ಇದರಲ್ಲಿ 52 ತಂಡಗಳನ್ನು ಒಡಿಶಾಕ್ಕೆ ಹಾಗೂ 45 ತಂಡಗಳನ್ನು ಪಶ್ಚಿಮ ಬಂಗಾಳಕ್ಕೆ ಕಳುಹಿಸಲಾಗಿದೆ. ಉಳಿದ ತಂಡಗಳು ಆಂಧ್ರಪ್ರದೇಶ, ತಮಿಳುನಾಡು, ಜಾರ್ಖಂಡ್ ಹಾಗೂ ಅಂಡಮಾನ್ ನಿಕೋಬಾರ್‌ನಲ್ಲಿ ನಿಯೋಜನೆಗೊಂಡಿವೆ.
ಪಶ್ಚಿಮ ಬಂಗಾಳ ಹಾಗೂ ಒಡಿಶಾದಲ್ಲಿ ಈವರೆಗೆ ಯಾವ ಚಂಡಮಾರುತದ ಸಂದರ್ಭದಲ್ಲೂ ಇಷ್ಟೊಂದು ತುಕಡಿಗಳನ್ನು ನಿಯೋಜಿಸಿರಲಿಲ್ಲ ಎಂದು ಎನ್‌ಡಿಆರ್‌ಎಫ್‌ನ ಮಹಾನಿರ್ದೇಶಕ ಎಸ್.ಎನ್. ಪ್ರಧಾನ್ ಟ್ವೀಟ್ ಮಾಡಿದ್ದಾರೆ.
ಸೇನಾ ತುಕಡಿಗಳು: ಭಾರತೀಯ ಸೇನೆಯು ಎಲ್ಲಾ ರೀತಿಯ ಸಂದರ್ಭಗಳನ್ನು ಎದುರಿಸಲು ಸನ್ನದ್ಧವಾಗಿರುವ 17 ತುಕಡಿಗಳನ್ನು ಪಶ್ಚಿಮ ಬಂಗಾಳದಲ್ಲಿ ನಿಯೋಜಿಸಿದೆ. ರಾಜ್ಯ ಸರ್ಕಾರದ ಮನವಿಗೆ ಸ್ಪಂದಿಸಿ ಈ ತುಕಡಿಗಳನ್ನು ನಿಯೋಜಿಸಲಾಗಿದೆ’ ಎಂದು ಸೇನೆಯ ಪ್ರಕಟಣೆ ತಿಳಿಸಿದೆ.
ನೆರವು ನೀಡಲು ರಾಹುಲ್ ಮನವಿ: ಚಂಡಮಾರುತದಿಂದ ಹಾನಿಗೆ ಒಳಗಾಗುವವರಿಗೆ ಎಲ್ಲಾ ರೀತಿಯ ನೆರವು ನೀಡುವಂತೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ಪಕ್ಷದ ಕಾರ್ಯಕರ್ತರಲ್ಲಿ ಮನವಿ ಮಾಡಿದ್ದಾರೆ.
ಕ್ಷಿಪಣಿ ಕೇಂದ್ರ ರಕ್ಷಣೆಗೆ ಕ್ರಮ:ಒಡಿಶಾದ ಚಾಂಡಿಪುರ ಮತ್ತು ಅಬ್ದುಲ್ ಕಲಾಂ ದ್ವೀಪದಲ್ಲಿರುವ ಡಿಆರ್‌ಡಿಒದ ಕ್ಷಿಪಣಿ ಉಡಾವಣಾ ಕೇಂದ್ರಗಳಿಗೂ ಚಂಡಮಾರುತದಿಂದ ಹಾನಿಯಾಗುವ ಸಂಭವವಿದ್ದು, ಅವುಗಳ ರಕ್ಷಣೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಚಾಂಡಿಪುರದಲ್ಲಿ ಮೂರು ಕ್ಷಿಪಣಿ ಲಾಂಚ್‌ಪ್ಯಾಡ್‌ಗಳು ಹಾಗೂ ಅಬ್ದುಲ್ ಕಲಾಂ ದ್ವೀಪದಲ್ಲಿ ಒಂದು ಕ್ಷಿಪಣಿ ಉಡಾವಣಾ ಕೇಂದ್ರವಿದೆ. ಇದಲ್ಲದೆ ಎರಡು ಪ್ರತ್ಯೇಕ ನಿಯಂತ್ರಣ ಕೊಠಡಿಗಳೂ ಇಲ್ಲಿವೆ. ಚಂಡಮಾರುತವು ಇಲ್ಲಿ ಹೆಚ್ಚಿನ ಹಾನಿ ಉಂಟುಮಾಡುವ ಸಾಧ್ಯತೆ ಇದೆ ಎಂದು ನಿರೀಕ್ಷಿಸಲಾಗಿದೆ.
‘ಇಲ್ಲಿನ ನಿಯಂತ್ರಣ ಕೊಠಡಿ ಹಾಗೂ ಬ್ಲಾಕ್‌ಹೌಸ್‌ಗಳನ್ನು ಗಂಟೆಗೆ 400 ಕಿ.ಮೀ. ವೇಗದ ಗಾಳಿಯನ್ನೂ ತಡೆದುಕೊಳ್ಳುವಂತೆ ವಿನ್ಯಾಸಗೊಳಿಸಲಾಗಿದೆ. ಉಳಿದಂತೆ, ಹಾನಿಯನ್ನು ಸಾಧ್ಯವಾದಷ್ಟು ಕಡಿಮೆ ಮಾಡುವ ರೀತಿಯಲ್ಲಿ ಎಲ್ಲಾ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಯಾವುದೇ ಸ್ಥಿತಿಯನ್ನು ಎದುರಿಸಲು ನಾವು ಸನ್ನದ್ಧರಾಗಿದ್ದೇವೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.