ಲಂಡನ್: ಭಾರತ ಮೂಲದ ಮಾಧ್ಯಮ ಕಾರ್ಯನಿರ್ವಾಹಕ ಡಾ. ಸಮೀರ್ ಶಾ ಅವರು ಬ್ರಿಟಿಷ್ ಬ್ರಾಡ್‌ಕಾಸ್ಟ್ ಕಾರ್ಪೊರೇಶನ್‌ನ(ಬಿಬಿಸಿ) ಅಧ್ಯಕ್ಷ ಸ್ಥಾನದ ಆಯ್ಕೆ ಪ್ರಕ್ರಿಯೆಯ ಪರಿಶೀಲನೆಯಲ್ಲಿ ತೇರ್ಗಡೆಯಾಗಿದ್ದು, ಅವರ ಆಯ್ಕೆಗೆ ಈ ವಾರ ಕಿಂಗ್ ಚಾರ್ಲ್ಸ್ಒಪ್ಪಿಗೆ ಸೂಚಿಸಲಿದ್ದಾರೆ.
40 ವರ್ಷಗಳಿಂದ ಬಿಬಿಸಿಯಲ್ಲಿ ಕೆಲಸ ಮಾಡುತ್ತಿರುವ ಅವರನ್ನು ಕಳೆದ ವರ್ಷ ಡಿಸೆಂಬರ್‌ನಲ್ಲಿ ಸರ್ಕಾರದ ಆದ್ಯತೆಯ ಅಭ್ಯರ್ಥಿಯಾಗಿ ಆಯ್ಕೆ ಮಾಡಲಾಗಿತ್ತು. ಹೌಸ್ ಆಫ್ ಕಾಮನ್ಸ್ ಮೀಡಿಯಾ ಕಲ್ಚರ್, ಮೀಡಿಯಾ ಮತ್ತು ಸ್ಪೋರ್ಟ್ ಸೆಲೆಕ್ಟ್ ಕಮಿಟಿಯ ಸಂಸದರು ನೇಮಕಾತಿ ಪೂರ್ವ ಪರಿಶೀಲನೆಯ ಭಾಗವಾಗಿ ಅವರನ್ನು ಪ್ರಶ್ನಿಸಿದ್ದರು. .
72 ವರ್ಷ ವಯಸ್ಸಿನ ಶಾ ಪ್ರತಿ ವರ್ಷಕ್ಕೆ 160,000 ಪೌಂಡ್ ಸಂಭಾವನೆ ಪಡೆಯಲಿದ್ದಾರೆ. ನಾಲ್ಕು ವರ್ಷಗಳ ಅವಧಿಯ ಬಿಬಿಸಿ ಅಧ್ಯಕ್ಷ ಹುದ್ದೆಗೆ ಆಯ್ಕೆಯಾದ ಮೊದಲ ಭಾರತ-ಮೂಲದ ವ್ಯಕ್ತಿ ಸಮೀರ್ ಶಾ. ಮಾರ್ಚ್ 4ರಿಂದ ಅವರ ಅಧಿಕಾರದ ಅವಧಿ ಆರಂಭವಾಗಲಿದ್ದು, 2028, ಮಾರ್ಚ್ ತಿಂಗಳಲ್ಲಿ ಅಂತ್ಯವಾಗಲಿದೆ.
‘ಟಿವಿ ಕಾರ್ಯಕ್ರಮಗಳ ನಿರ್ಮಾಣ ಮತ್ತು ಪತ್ರಿಕೋದ್ಯಮದಲ್ಲಿ 40 ವರ್ಷಗಳಿಗಿಂತ ಹೆಚ್ಚು ಅನುಭವ ಹೊಂದಿರುವ ಡಾ. ಸಮೀರ್ ಶಾ ಅವರು, ಬಿಬಿಸಿ ಅಧ್ಯಕ್ಷ ಸ್ಥಾನಕ್ಕೆ ಏರಲು ಬೇಕಾದ ಅನುಭವದ ಸಂಪತ್ತನ್ನು ಹೊಂದಿದ್ದಾರೆ’ ಎಂದು ಬ್ರಿಟನ್ನಿನ ಸಂಸ್ಕೃತಿ ಸಚಿವಾಲಯದ ಕಾರ್ಯದರ್ಶಿ ಲೂಸಿ ಫ್ರೇಜರ್ ಅವರು ತಮ್ಮ ಆಯ್ಕೆಯನ್ನು ಘೋಷಿಸುವ ಸಂದರ್ಭ ಹೇಳಿದ್ದಾರೆ.
‘ವೇಗವಾಗಿ ಬದಲಾಗುತ್ತಿರುವ ಮಾಧ್ಯಮ ಲೋಕದಲ್ಲಿ ಬಿಬಿಸಿ ಯಶಸ್ವಿನ ಬಗ್ಗೆ ಶಾ ಸ್ಪಷ್ಟ ಗುರಿ ಹೊಂದಿದ್ದಾರೆ. ಭವಿಷ್ಯದ ಸವಾಲುಗಳು ಮತ್ತು ಅವಕಾಶಗಳನ್ನು ನಿರ್ವಹಿಸಲು ಬಿಬಿಸಿಗೆ ಅಗತ್ಯವಿರುವ ಬೆಂಬಲವನ್ನು ಅವರು ನೀಡುತ್ತಾರೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ’ ಎಂದು ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.