ಬೀಜಿಂಗ್: ಉಕ್ರೇನ್ ಮೇಲೆ ರಷ್ಯಾ ನಡೆಸುತ್ತಿರುವ ಯುದ್ಧದಲ್ಲಿ, ಚೀನಾವು ರಷ್ಯಾಗೆ ಶಸ್ತ್ರಾಸ್ತ್ರ ಒದಗಿಸುತ್ತಿದೆ ಎಂಬ ಅಮೆರಿಕದ ಆರೋಪವನ್ನು ಚೀನಾ ಸೋಮವಾರ ತಳ್ಳಿಹಾಕಿದೆ. ಅಮೆರಿಕವು ‘ಸುಳ್ಳು’ ಆರೋಪ ಹೊರಿಸುತ್ತಿದೆ ಎಂದು ಕಿಡಿಕಾರಿದೆ.
‘ಯುದ್ಧಭೂಮಿಗೆ ಶಸ್ತ್ರಾಸ್ತ್ರಗಳನ್ನು ಅಮೆರಿಕ ಕಳುಹಿಸುತ್ತಿದೆ ಹೊರೆತು ಚೀನಾವಲ್ಲ’ ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ವಾಂಗ್ ವೇಬಿನ್ ಹೇಳಿದ್ದಾರೆ.
‘ಯುದ್ಧವನ್ನು ಕೊನೆಗೊಳಿಸುವತ್ತ ಅಮೆರಿಕವು ಕಾರ್ಯಪ್ರವೃತ್ತವಾಗಬೇಕು. ಶಾಂತಿ ನೆಲೆಸಿ, ಎರಡೂ ದೇಶಗಳ ನಡುವೆ ಮಾತುಕತೆ ನಡೆಯುವಂತೆ ಪ್ರೋತ್ಸಾಹಿಸಬೇಕು. ಇವೆಲ್ಲವನ್ನು ಬಿಟ್ಟು ಅಮೆರಿಕವು ಸುಳ್ಳು ಸುದ್ದಿ ಹರಡುವುದು ಮತ್ತು ಮತ್ತೊಬ್ಬರ ಮೇಲೆ ಗೂಬೆ ಕೂರಿಸುವುದರಲ್ಲಿ ನಿರತವಾಗಿದೆ’ ಎಂದು ದೂರಿದರು.
‘ಚೀನಾ–ರಷ್ಯಾ ನಡುವೆ ಇರುವ ಬಾಂಧವ್ಯದ ಕುರಿತು ಅಮೆರಿಕವು ಬೊಟ್ಟು ಮಾಡುವುದನ್ನು ಒಪ್ಪಲು ಸಾಧ್ಯವೇ ಇಲ್ಲ’ ಎಂದರು.
‘ಶಾಂತಿ ನೆಲೆಸಬೇಕು ಹಾಗೂ ಎರಡೂ ದೇಶಗಳು ಕೂತು ಮಾತುಕತೆ ನಡೆಸಬೇಕು ಎಂದಷ್ಟೇ ಚೀನಾ ಬಯಸುತ್ತದೆ’ ಎಂದು ವಾಂಗ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.