ADVERTISEMENT

ಕ್ರೈಸ್ತ ಧರ್ಮ ಪುನರುಜ್ಜೀವನಕ್ಕೆ ಶ್ರಮಿಸಿದ ಬೆನೆಡಿಕ್ಟ್‌: ವಿಶ್ವ ನಾಯಕರ ಕಂಬನಿ

ಏಜೆನ್ಸೀಸ್
Published 31 ಡಿಸೆಂಬರ್ 2022, 14:45 IST
Last Updated 31 ಡಿಸೆಂಬರ್ 2022, 14:45 IST
ಮ್ಯೂನಿಕ್‌ನಲ್ಲಿರುವ ಕ್ಯಾಥೆಡ್ರಾಲ್‌ ಚರ್ಚ್‌ನಲ್ಲಿ ಬೆನೆಡಿಕ್ಟ್‌ ಅವರಿಗೆ ಶನಿವಾರ ಶ್ರದ್ಧಾಂಜಲಿ ಸಲ್ಲಿಸಲಾಯಿತು–ಎಎಫ್‌ಪಿ ಚಿತ್ರ 
ಮ್ಯೂನಿಕ್‌ನಲ್ಲಿರುವ ಕ್ಯಾಥೆಡ್ರಾಲ್‌ ಚರ್ಚ್‌ನಲ್ಲಿ ಬೆನೆಡಿಕ್ಟ್‌ ಅವರಿಗೆ ಶನಿವಾರ ಶ್ರದ್ಧಾಂಜಲಿ ಸಲ್ಲಿಸಲಾಯಿತು–ಎಎಫ್‌ಪಿ ಚಿತ್ರ    

ವ್ಯಾಟಿಕನ್‌ ಸಿಟಿ: ವಿಶ್ರಾಂತ ಪೋಪ್‌ 16ನೇ ಬೆನೆಡಿಕ್ಟ್‌ ಅವರು ಯುರೋಪ್‌ನಲ್ಲಿಜಾತ್ಯಾತೀತತೆ ನೆಲೆಗೊಂಡಿದ್ದ ಕಾಲಘಟ್ಟದಲ್ಲಿ ಕ್ರೈಸ್ತ ಧರ್ಮ ಪುನರುಜ್ಜೀವನಗೊಳಿಸಲು ಶ್ರಮಿಸಿದ್ದರು. ಅವರು 2013ರ ಫೆಬ್ರುವರಿ 11ರಂದು ಪೋಪ್‌ ಸ್ಥಾನಕ್ಕೆ ರಾಜೀನಾಮೆ ನೀಡಿ ಅಚ್ಚರಿ ಮೂಡಿಸಿದ್ದರು.

ಅವರು ಜನಿಸಿದ್ದು1927ರ ಏಪ್ರಿಲ್‌ 16ರಂದು ಜರ್ಮನಿಯ ಮಾರ್ಕ್‌ಟಲ್‌ ಅಮ್‌ ಇನ್‌ನಲ್ಲಿ. ಮೂಲ ಹೆಸರು ಜೋಸೆಫ್‌ ಅಲೋಸಿಯಸ್‌ರ‍್ಯಾಟ್ಜಿಂಗರ್.ತಂದೆ ಜೋಸೆಫ್ ರ‍್ಯಾಟ್ಜಿಂಗರ್‌. ತಾಯಿ ಹೆಸರು ಮರಿಯಾ. ಈ ದಂಪತಿಯ ಮೂವರು ಮಕ್ಕಳಲ್ಲಿ ಬೆನೆಡಿಕ್ಟ್‌ ಅವರೇ ಕೊನೆಯವರು.

1969ರಿಂದ 1977ರವರೆಗೆ ಅವರುರೆಜೆನ್ಸ್‌ಬರ್ಗ್‌ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಕೆಲಸ ಮಾಡಿದ್ದರು. 1977ರಲ್ಲಿ ಮ್ಯೂನಿಕ್‌ನ ಆರ್ಚ್‌ಬಿಷಪ್‌ ಆಗಿ, ನಂತರ ಕ್ರೈಸ್ತ ಧರ್ಮಾಧ್ಯಕ್ಷರಾಗಿ ನೇಮಕವಾಗಿದ್ದ ಅವರು ಪೋಪ್‌ ಹುದ್ದೆಗೇರಿದ್ದು ಅನಿರೀಕ್ಷಿತ. ಸೇಂಟ್‌ ಜಾನ್‌ ಪಾಲ್‌–2 ಅವರ ನಿಧನದ ನಂತರ ಅವರ ಸ್ಥಾನ ಅಲಂಕರಿಸುವಂತೆ ಬೆನೆಡಿಕ್ಟ್‌ ಅವರ ಮೇಲೆ ಒತ್ತಡ ಹೇರಲಾಗಿತ್ತು. ಒಲ್ಲದ ಮನಸ್ಸಿನಿಂದಲೇ ಅವರು ಈ ಜವಾಬ್ದಾರಿ ವಹಿಸಿಕೊಂಡಿದ್ದರು. ಎಂಟು ವರ್ಷ ಆಡಳಿತ ನಡೆಸಿದ್ದ ಅವರಿಗೆ2010ರಲ್ಲಿ ಕೇಳಿ ಬಂದಿದ್ದ ಲೈಂಗಿಕ ಕಿರುಕುಳ ಹಗರಣ ಮುಳುವಾಗಿತ್ತು.

ADVERTISEMENT

ತಮ್ಮ ಅಧಿಕಾರಾವಧಿಯಲ್ಲಿ ಅವರು ಕೆಲವು ನಿರ್ಣಾಯಕ ಮತ್ತು ವಿವಾದಾತ್ಮಕ ನಿರ್ಣಯಗಳನ್ನು ಕೈಗೊಂಡಿದ್ದರು. ಯುರೋಪಿಯನ್ನರಿಗೆ ಕ್ರೈಸ್ತ ಪರಂಪರೆ ಬಗ್ಗೆ ಅರಿವು ಮೂಡಿಸುವ ಕೆಲಸದಲ್ಲಿ ನಿರಂತರವಾಗಿ ತೊಡಗಿದ್ದರು. ಬೆನೆಡಿಕ್ಟ್‌ ಅವರು ಶಿಕ್ಷಕ, ದೇವತಾಶಾಸ್ತ್ರಜ್ಞ ಮತ್ತು ಸೈದ್ಧಾಂತಿಕವಾದಿಯಾಗಿ ಗುರುತಿಸಿಕೊಂಡಿದ್ದರು.

‘ಕಾಂಡೋಮ್‌ಗಳನ್ನು ಹಂಚುವುದರಿಂದ ಏಡ್ಸ್‌ ಸಮಸ್ಯೆ ನಿವಾರಣೆಯಾಗುವುದಿಲ್ಲ’ ಎಂದು 2009ರಲ್ಲಿ ತಿಳಿಸಿದ್ದ ಅವರು ಒಂದು ವರ್ಷದ ಬಳಿಕ ಇದಕ್ಕೆ ತದ್ವಿರುದ್ಧವಾದ ಹೇಳಿಕೆ ನೀಡಿದ್ದರು.

2006ರ ಸೆಪ್ಟೆಂಬರ್‌ನಲ್ಲಿ ನಡೆದಿದ್ದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಅವರು ಹಿಂಸೆಯು ಇಸ್ಲಾಂ ಧರ್ಮದಲ್ಲಿ ಅಂತರ್ಗತವಾಗಿದೆ ಎಂಬ ಅಭಿಪ್ರಾಯವನ್ನು ಪ್ರತಿಪಾದಿಸುವ ಧಾಟಿಯಲ್ಲಿ ಮಾತನಾಡಿದ್ದರು. ಇದು ಮುಸ್ಲಿಮರ ಆಕ್ರೋಶಕ್ಕೆ ಕಾರಣವಾಗಿತ್ತು. ಬಳಿಕ ಇದಕ್ಕಾಗಿ ಕ್ಷಮೆ ಕೋರಿದ್ದರು.

ವಿಶ್ವ ನಾಯಕರ ಕಂಬನಿ: ಪ್ರಧಾನಿ ನರೇಂದ್ರ ಮೋದಿ, ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌, ಇಟಲಿ ಪ್ರಧಾನಿ ಜಿಯಾರ್ಜಿಯಾ ಮೆಲಾನಿ, ಫ್ರಾನ್ಸ್‌ ಅಧ್ಯಕ್ಷ ಎಮ್ಯಾನುಯೆಲ್‌ ಮ್ಯಾಕ್ರಾನ್‌, ಬ್ರಿಟನ್‌ ಪ್ರಧಾನಿ ರಿಷಿ ಸುನಕ್‌ ಸೇರಿದಂತೆ ವಿಶ್ವ ನಾಯಕರು ವಿಶ್ರಾಂತ ಪೋಪ್‌ ಬೆನೆಡಿಕ್ಟ್‌ ಅವರ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.

‘ಬೆನೆಡಿಕ್ಟ್‌ ಅವರು ಈ ಸಮಾಜಕ್ಕೆ ನೀಡಿರುವ ಕೊಡುಗೆ ಅನನ್ಯವಾದುದು. ಅವರು ಕ್ರಿಸ್ತನ ಬೋಧನೆಗಳನ್ನು ಪಸರಿಸುವುದಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದರು’ ಎಂದು ಮೋದಿ ಟ್ವೀಟ್‌ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.