ADVERTISEMENT

ಇಸ್ರೇಲ್‌: ಹೊಸ ಸಮ್ಮಿಶ್ರ ಸರ್ಕಾರ ರಚನೆಗೆ ವಿರೋಧ ಪಕ್ಷಗಳ ಸಿದ್ಧತೆ

ಪ್ರಧಾನಿ ಬೆಂಜಮಿನ್ ನೆತನ್ಯಾಹು ಕೆಳಗಿಳಿಸುವ ರಾಜಕೀಯ ಚಟುವಟಿಕೆಗೆ ಆರಂಭ

ಪಿಟಿಐ
Published 3 ಜೂನ್ 2021, 6:12 IST
Last Updated 3 ಜೂನ್ 2021, 6:12 IST
ಬೆಂಜಮಿನ್ ನೆತನ್ಯಾಹು
ಬೆಂಜಮಿನ್ ನೆತನ್ಯಾಹು   

ಜೆರುಸಲೇಂ: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ವಿರೋಧಿ ನಾಯಕರು ಹೊಸ ಸಮ್ಮಿಶ್ರ ಆಡಳಿತ ಒಕ್ಕೂಟವನ್ನು ರಚಿಸುವ ಒಪ್ಪಂದಕ್ಕೆ ಬಂದಿರುವುದಾಗಿ ಬುಧವಾರ ಘೋಷಿಸಿದ್ದು, ನೆತನ್ಯಾಹು ಅವರ ಅಧಿಕಾರ ಕೊನೆಗೊಳ್ಳುವುದು ಬಹುತೇಕ ನಿಶ್ಚಿತವಾಗಿದೆ.

ವಿರೋಧ ಪಕ್ಷದ ನಾಯಕ ಯೇರ್‌ ಲ್ಯಾಪಿಡ್ ಮತ್ತು ಅವರ ಪ್ರಮುಖ ಸಮ್ಮಿಶ್ರ ಪಾಲುದಾರ, ಮಾಜಿ ರಕ್ಷಣಾ ಸಚಿವ ನಫ್ತಾಲಿ ಬೆನೆಟ್‌ ಅವರು ಮಧ್ಯರಾತ್ರಿ ನಡೆದ ನಾಟಕೀಯ ಬೆಳವಣಿಗೆಯಲ್ಲಿ ಹೊಸ ಒಕ್ಕೂಟ ರಚಿಸುವ ವಿಚಾರವನ್ನು ಪ್ರಕಟಿಸಿದ್ದಾರೆ. ಈ ಮೂಲಕ ಎರಡು ವರ್ಷಗಳಲ್ಲಿ ದೇಶದಲ್ಲಿ ಐದನೇ ಬಾರಿ ಚುನಾವಣೆ ನಡೆಯುವುದು ತಪ್ಪಲಿದೆ.

‘ಈ ಸರ್ಕಾರವು ತನ್ನ ಪರ ಮತ ಹಾಕಿದ ಮತ್ತು ಹಾಕದಿರುವ ಇಸ್ರೇಲ್‌ನ ಎಲ್ಲಾ ನಾಗರಿಕರ ಪರವಾಗಿ ಕೆಲಸ ಮಾಡುತ್ತದೆ. ಇಸ್ರೇಲ್ ಸಮಾಜವನ್ನು ಒಂದುಗೂಡಿಸಲು ಎಲ್ಲ ರೀತಿಯಲ್ಲೂ ಕೆಲಸ ಮಾಡಲಿದೆ‘ ಎಂದು ಲ್ಯಾಪಿಡ್ ಹೇಳಿದರು.

ADVERTISEMENT

ಒಪ್ಪಂದದ ಪ್ರಕಾರ, ಹೊಸ ಸರ್ಕಾರದಲ್ಲಿ ಲ್ಯಾಪಿಡ್ ಮತ್ತು ಬೆನೆಟ್ ಪ್ರಧಾನಿ ಕಾರ್ಯವನ್ನು ಪಾಳಿ ಆಧಾರದಲ್ಲಿ ವಿಭಜಿಸಿಕೊಳ್ಳಲಿದ್ದಾರೆ. ಬೆನೆಟ್ ಮೊದಲ ಎರಡು ವರ್ಷ ಸೇವೆ ಸಲ್ಲಿಸಿದ್ದಾರೆ. ನಂತರ ಲ್ಯಾಪಿಡ್ ಅಂತಿಮ ಎರಡು ವರ್ಷ ಕಾರ್ಯನಿರ್ವಹಿಸಲಿದ್ದಾರೆ. ಈ ಐತಿಹಾಸಿಕ ಒಪ್ಪಂದವು ಯುನೈಟೆಡ್ ಇಸ್ಲಾಮಿಕ್ ಪಕ್ಷವಾದ ಯುನೈಟೆಡ್ ಅರಬ್ ಲಿಸ್ಟ್ ಅನ್ನೂ ಒಳಗೊಂಡಿದೆ. ಇದು ಆಡಳಿತದ ಒಕ್ಕೂಟದ ಭಾಗವಾಗಿರುವ ಮೊದಲ ಅರಬ್ ಪಕ್ಷವಾಗಿದೆ.

ಸಂಸತ್‌ನಲ್ಲಿ ಮುಂದಿನ ವಾರ ಈ ಸಂಬಂಧ ಮತದಾನ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.