ADVERTISEMENT

ಇಸ್ರೇಲ್ ಭದ್ರತೆಗೆ ಅಮೆರಿಕದ ಬದ್ಧತೆಯನ್ನು ಪುನರುಚ್ಚರಿಸಿದ ಬೈಡನ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 10 ಅಕ್ಟೋಬರ್ 2024, 15:33 IST
Last Updated 10 ಅಕ್ಟೋಬರ್ 2024, 15:33 IST
<div class="paragraphs"><p>ಜೋ ಬೈಡನ್</p></div>

ಜೋ ಬೈಡನ್

   

ರಾಯಿಟರ್ಸ್ ಚಿತ್ರ

ವಾಷಿಂಗ್ಟನ್: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ಜೊತೆಗೆ ದೂರವಾಣಿಯಲ್ಲಿ ಮಾತನಾಡಿದ ಅಮೆರಿಕದ ಅಧ್ಯಕ್ಷ ಜೋ ಬೈಡನ್, ಇಸ್ರೇಲ್ ಭದ್ರತೆಗೆ ಅಮೆರಿಕದ ಅಚಲ ಬದ್ಧತೆಯನ್ನು ಪುನರುಚ್ಚರಿಸಿದ್ದಾರೆ.

ADVERTISEMENT

ಶ್ವೇತಭವನದ ಹೇಳಿಕೆಯ ಪ್ರಕಾರ, ಸಾವಿರಾರು ಕ್ಷಿಪಣಿಗಳು ಮತ್ತು ರಾಕೆಟ್‌ಗಳನ್ನು ಹಾರಿಸಿದ ಹಿಜ್ಬುಲ್ಲಾದಿಂದ ನಾಗರಿಕರನ್ನು ರಕ್ಷಿಸುವ ಇಸ್ರೇಲ್‌ನ ಹಕ್ಕನ್ನು ಬೈಡನ್ ಪ್ರತಿಪಾದಿಸಿದರು. ಅಲ್ಲದೆ, ದಟ್ಟ ಜನಸಂಖ್ಯೆ ಇರುವ ಬೈರೂತ್‌ನಂತಹ ಪ್ರದೇಶಗಳಲ್ಲಿ ನಾಗರಿಕರಿಗೆ ಹಾನಿ ಕಡಿಮೆ ಮಾಡುವ ಅಗತ್ಯವನ್ನು ಒತ್ತಿಹೇಳಿದ್ದಾರೆ.

ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಸಹ ಇಸ್ರೇಲಿ ಪ್ರಧಾನಿಯೊಂದಿಗಿನ ಕರೆಯಲ್ಲಿ ಮಾತನಾಡಿದ್ದಾರೆ.

ಅಕ್ಟೋಬರ್ 1ರಂದು ಇಸ್ರೇಲ್ ಮೇಲೆ ಇರಾನ್‌ನ ಖಂಡಾಂತರ ಕ್ಷಿಪಣಿ ದಾಳಿಯನ್ನು ಬೈಡನ್ ಖಂಡಿಸಿದ್ದಾರೆ. ಅಂತಹ ಆಕ್ರಮಣದ ವಿರುದ್ಧ ಸಾಮೂಹಿಕ ಕ್ರಮದ ಅಗತ್ಯವನ್ನು ಒತ್ತಿಹೇಳಿದ್ದಾರೆ. ಎರಡೂ ದೇಶಗಳಲ್ಲಿ ನಾಗರಿಕರು ಸುರಕ್ಷಿತವಾಗಿ ತಮ್ಮ ಮನೆಗಳಿಗೆ ಹಿಂದಿರುಗಲು ‘ಬ್ಲೂ ಲೈನ್’ಸೃಷ್ಟಿಯ ಕುರಿತಂತೆ ರಾಜತಾಂತ್ರಿಕ ವ್ಯವಸ್ಥೆಯನ್ನು ಪ್ರತಿಪಾದಿಸಿದ್ದಾರೆ.

ಗಾಜಾ ಜೊತೆಗಿನ ರಾಜತಾಂತ್ರಿಕತೆ ನವೀಕರಿಸುವ ಮತ್ತು ಹಮಾಸ್ ಒತ್ತೆಯಾಳಾಗಿರಿಸಿಕೊಂಡಿರುವವರ ಶೀಘ್ರ ಬಿಡುಗಡೆ ಬಗ್ಗೆ ನಾಯಕರು ಮಾತುಕತೆ ನಡೆಸಿದರು.

ಗಾಜಾದಲ್ಲಿನ ಮಾನವೀಯ ಪರಿಸ್ಥಿತಿ ಮತ್ತು ಜೋರ್ಡಾನ್‌ನಿಂದ ತಕ್ಷಣವೇ ಕಾರಿಡಾರ್ ಅನ್ನು ಪುನಶ್ಚೇತನಗೊಳಿಸುವ ಮೂಲಕ ಉತ್ತರಕ್ಕೆ ಪ್ರವೇಶ ಮರುಸ್ಥಾಪಿಸುವ ಅಗತ್ಯವನ್ನು ಬೈಡನ್ ಚರ್ಚಿಸಿದರು. ಅಲ್ಲದೆ, ಇಸ್ರೇಲ್ ಜೊತೆ ನಿಕಟ ಸಂಪರ್ಕದಲ್ಲಿರಲು ಒಪ್ಪಿಕೊಂಡರು ಎಂದು ಪ್ರಕಟಣೆ ತಿಳಿಸಿದೆ.

ಅಕ್ಟೋಬರ್ 1ರಂದು ಇರಾನ್ ಕನಿಷ್ಠ 200 ಖಂಡಾಂತರ ಕ್ಷಿಪಣಿಗಳನ್ನು ಇಸ್ರೇಲ್‌ನತ್ತ ಉಡಾಯಿಸಿದೆ. ಇದು ಸದ್ಯ ನಡೆಯುತ್ತಿರುವ ಇರಾನ್-ಇಸ್ರೇಲ್ ಸಂಘರ್ಷದಲ್ಲಿ ಅತಿದೊಡ್ಡ ದಾಳಿಯಾಗಿದೆ.

ಬುಧವಾರ, ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್) ಬೈರೂತ್‌ನ ದಹೀಹ್ ಜಿಲ್ಲೆಯಲ್ಲಿ ಎರಡು ಪ್ರಮುಖ ಹಿಜ್ಬುಲ್ಲಾ ನೆಲೆಗಳನ್ನು ಧ್ವಂಸಗೊಳಿಸಿದ್ದವು. ನಿಖರ ದಾಳಿಯಲ್ಲಿ ಭಯೋತ್ಪಾದಕರ ಗುಪ್ತಚರ ಕೇಂದ್ರ ಕಚೇರಿ ಮತ್ತು ಪ್ರಮುಖ ಶಸ್ತ್ರಾಸ್ತ್ರ ಉತ್ಪಾದನಾ ಘಟಕವನ್ನು ನಾಶಪಡಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.