ಅಟ್ಲಾಂಟಾ: ಅಮೆರಿಕದ ಅಧ್ಯಕ್ಷ ಜೋ ಬೈಡನ್ ಮತ್ತು ರಿಪಬ್ಲಿಕನ್ ಪಕ್ಷದ ಪ್ರತಿಸ್ಪರ್ಧಿ ಡೊನಾಲ್ಡ್ ಟ್ರಂಪ್ ನಡುವಣ ಮೊದಲ ಮುಖಾಮುಖಿ ಚರ್ಚೆ ನಡೆದಿದ್ದು, ಇಬ್ಬರೂ ಪರಸ್ಪರ ಆರೋಪ–ಪ್ರತ್ಯಾರೋಪ ಮಾಡಿದ್ದಾರೆ.
ಬಹಿರಂಗ ಚರ್ಚೆಯು ದೇಶದ ಆರ್ಥಿಕ ಸ್ಥಿತಿಗತಿ, ಗಡಿ ವಿವಾದ, ವಿದೇಶಾಂಗ ನೀತಿ, ಗರ್ಭಪಾತ ಕುರಿತ ಕಾನೂನುಗಳು ಮತ್ತು ರಾಷ್ಟ್ರೀಯ ಭದ್ರತೆಯ ವಿಚಾರದಲ್ಲಿ ಇಬ್ಬರ ನಡುವೆ ತುರುಸಿನ ವಾದ–ವಿವಾದಕ್ಕೆ ವೇದಿಕೆಯೊದಗಿಸಿತು. ಇಬ್ಬರೂ ಪರಸ್ಪರರನ್ನು ‘ಸುಳ್ಳುಗಾರ’ ಮತ್ತು ‘ಅಮೆರಿಕ ತನ್ನ ಇತಿಹಾಸದಲ್ಲೇ ಕಂಡಿರದ ಅತ್ಯಂತ ಕೆಟ್ಟ ಅಧ್ಯಕ್ಷ’ ಎಂದು ದೂರಿದರು.
90 ನಿಮಿಷ ನಡೆದ ಚರ್ಚೆಯಲ್ಲಿ ಬೈಡನ್ ಅವರು ಟ್ರಂಪ್ ಅವರಿಗೆ ಸಂಬಂಧಿಸಿದ ವೈಯಕ್ತಿಕ ವಿಚಾರಗಳನ್ನು ಪ್ರಸ್ತಾಪಿಸಿ ಟೀಕೆ ಮಾಡಿದರೆ, ಟ್ರಂಪ್ ಅವರು ಹಾಲಿ ಅಧ್ಯಕ್ಷರ ಆಡಳಿತಕ್ಕೆ ಸಂಬಂಧಿಸಿದ ವಿಚಾರಗಳಿಗೆ ಒತ್ತು ಕೊಟ್ಟು ಮಾತನಾಡಿದರು.
ಮಹಿಳೆಯೊಬ್ಬರ ಮೇಲೆ ಸಾರ್ವಜನಿಕವಾಗಿ ಕಿರುಕುಳ ನೀಡಿದ ಪ್ರಕರಣದಲ್ಲಿ ದೊಡ್ಡ ಮೊತ್ತವನ್ನು ಟ್ರಂಪ್ ಅವರು ದಂಡವಾಗಿ ತೆತ್ತ ವಿಚಾರವನ್ನು ಬೈಡನ್ ಪ್ರಸ್ತಾಪಿಸಿದರು. ‘ನಿಮ್ಮ ಪತ್ನಿ ಗರ್ಭಿಣಿಯಾಗಿದ್ದ ಅವಧಿಯಲ್ಲಿ ನೀವು ನೀಲಿ ಚಿತ್ರ ತಾರೆಯೊಂದಿಗೆ ಇಡೀ ರಾತ್ರಿ ಕಳೆದಿದ್ದೀರಿ’ ಎಂದು ಟೀಕಿಸಿದರು. ‘ಬೀಡಾಡಿ ಬೆಕ್ಕಿನ ಚಾರಿತ್ರ್ಯ ನಿಮ್ಮದು’ ಎಂದು ಹರಿಹಾಯ್ದರು.
ಅಮೆರಿಕದ ವಿವಿಧ ನ್ಯಾಯಾಲಯಗಳು ಟ್ರಂಪ್ ವಿರುದ್ಧ ನೀಡಿರುವ ತೀರ್ಪುಗಳು ಮತ್ತು ಟ್ರಂಪ್ ಬೆಂಬಲಿಗರು ಅಮೆರಿಕದ ಸಂಸತ್ ಮೇಲೆ ದಾಳಿ ಮಾಡಿದ ವಿಚಾರಗಳನ್ನೂ ಬೈಡನ್ ಪ್ರಸ್ತಾಪ ಮಾಡಿದರು.
ಟ್ರಂಪ್ ಅವರು ಹಾಲಿ ಸರ್ಕಾರದ ವಲಸೆ ನೀತಿಯನ್ನು ಉಲ್ಲೇಖಿಸಿ ಬೈಡನ್ ವಿರುದ್ಧ ಹರಿಹಾಯ್ದರು. ‘ನಮ್ಮದು ಈಗ ಅನಾಗರಿಕ ದೇಶ ಎನಿಸಿದೆ. ಅಮೆರಿಕದ ಗಡಿಗಳನ್ನು ಅವರು (ಬೈಡನ್) ಎಲ್ಲರಿಗೂ ಮುಕ್ತವಾಗಿ ತೆರೆದರು. ಅಕ್ರಮವಾಗಿ ನಮ್ಮ ದೇಶ ಪ್ರವೇಶಿಸಿದವರನ್ನು ಹೊರಹಾಕಬೇಕು. ಅವರನ್ನು ಸಾಧ್ಯವಾದಷ್ಟು ಬೇಗ ಹೊರಹಾಕದಿದ್ದರೆ, ನಮ್ಮ ದೇಶವನ್ನು ನಾಶಪಡಿಸಲಿದ್ದಾರೆ’ ಎಂದು ದೂರಿದರು.
‘ಅವರು (ಅಕ್ರಮ ವಲಸಿಗರು) ನ್ಯೂಯಾರ್ಕ್ ನಗರ ಮತ್ತು ಇತರ ಸ್ಥಳಗಳಲ್ಲಿ ಐಷಾರಾಮಿ ಹೋಟೆಲ್‌ಗಳಲ್ಲಿ ವಾಸಿಸುತ್ತಿದ್ದಾರೆ. ನಮ್ಮ ಮಾಜಿ ಯೋಧರು ಬೀದಿಗೆ ಬಿದ್ದಿದ್ದಾರೆ. ಸರ್ಕಾರವು ಅವರ ಬಗ್ಗೆ ಯಾವುದೇ ಕಾಳಜಿ ವಹಿಸಿಲ್ಲ. ಬೈಡನ್ ನಮ್ಮ ಸೈನಿಕರನ್ನು ಇಷ್ಟಪಡುವುದಿಲ್ಲ’ ಎಂದು ಪ್ರತಿಪಾದಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಬೈಡನ್, ‘ಟ್ರಂಪ್ ಆಡಿದ ಪ್ರತಿಯೊಂದು ಮಾತು ಕೂಡಾ ಸುಳ್ಳು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.