ವಾಷಿಂಗ್ಟನ್: ಕೋವಿಡ್–19 ಲಸಿಕೆಯ ಉತ್ಪಾದನೆ, ಪೂರೈಕೆಯನ್ನು ಹೆಚ್ಚಿಸಲು ವ್ಯಾಪಾರಕ್ಕೆ ಸಂಬಂಧಿಸಿದ ಬೌದ್ಧಿಕಆಸ್ತಿ ಹಕ್ಕುಗಳ (ಟಿಆರ್‌ಐಪಿಎಸ್) ಜಾರಿಯನ್ನು ತಾತ್ಕಾಲಿಕವಾಗಿ ತಡೆ ಹಿಡಿಯಬೇಕು ಎಂಬ ಭಾರತ, ದಕ್ಷಿಣ ಆಫ್ರಿಕಾದ ಮನವಿಗೆ ಬೆಂಬಲಿಸುವಂತೆ ಅಮೆರಿಕದ ಕೆಲವು ಸಂಸದರು ಅಧ್ಯಕ್ಷ ಜೋ ಬೈಡನ್ ಅವರನ್ನು ಒತ್ತಾಯಿಸಿದ್ದಾರೆ.
ಟಿಆರ್‌ಐಪಿಎಸ್ ಒಪ್ಪಂದದ ಕೆಲ ನಿಯಮಗಳ ಜಾರಿಗೆ ಕಾಲಮಿತಿಯ ತಡೆ ನೀಡುವಂತೆ ವಿಶ್ವ ವ್ಯಾಪಾರ ಸಂಘಟನೆಗೆ (ಡಬ್ಲ್ಯುಟಿಒ) ಭಾರತ ಹಾಗೂ ದಕ್ಷಿಣ ಆಫ್ರಿಕಾ ಮನವಿ ಮಾಡಿವೆ. ಇತರ ಹಲವಾರು ದೇಶಗಳು ಭಾರತದ ಈ ನಡೆಗೆ ಬೆಂಬಲ ಸೂಚಿಸಿವೆ.
ಈ ಮೊದಲಿನ ಡೊನಾಲ್ಡ್ ಟ್ರಂಪ್ ಆಡಳಿತ ಇಂಥ ಮನವಿಯನ್ನು ವಿರೋಧಿಸಿತ್ತು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಸದರಾದ ರೋಸಾ ಡಿಲಾರೊ, ಜಾನ್ ಶಕೋವ್ಸ್ಕಿ, ಅರ್ಲ್ ಬ್ಲೂಮೆನಾರ್, ಲಾಯ್ಡ್ ಡಾಗೆಟ್, ಆಡ್ರಿಯಾನೋ ಎಸ್ಪಿಲಟ್ ಹಾಗೂ ಆ್ಯಂಡಿ ಲೆವಿನ್, ‘ಅಧ್ಯಕ್ಷ ಬೈಡನ್ ಅವರಿಗೆ ಈ ಸಂಬಂಧ 60ಕ್ಕೂ ಹೆಚ್ಚು ಸಂಸದರು ಪತ್ರ ಬರೆಯುತ್ತೇವೆ’ ಎಂದರು.
ಟಿಆರ್‌ಐಪಿಎಸ್‌ನ ಕೆಲ ನಿಯಮಗಳ ಜಾರಿಗೆ ತಾತ್ಕಾಲಿಕ ತಡೆ ನೀಡುವುದರಿಂದ, ಲಸಿಕೆ ಉತ್ಪಾದನೆಗೆ ಅಗತ್ಯವಿರುವ ತಂತ್ರಜ್ಞಾನದ ವಿನಿಮಯ ಸಾಧ್ಯವಾಗಲಿದೆ. ಇದರಿಂದ ವಿವಿಧ ದೇಶಗಳಿಗೆ ಲಸಿಕೆ ಮಾರಾಟ ಮಾಡುವಾಗ ನಿರ್ಬಂಧ ಹೇರಲು ಅವಕಾಶ ಇರುವುದಿಲ್ಲ. ವಿವಾದಗಳೂ ಸೃಷ್ಟಿಯಾಗುವುದಿಲ್ಲ ಎಂದು ಅಮೆರಿಕದ ಸಂಸದರು ಪ್ರತಿಪಾದಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.