ವಾಷಿಂಗ್ಟನ್: ಭಾರತ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಾತುಕತೆ ನಡೆಸಿರುವುದಾಗಿ ಅಮೆರಿಕದ ಅಧ್ಯಕ್ಷ ಜೋ ಬೈಡನ್ ತಿಳಿಸಿದ್ದಾರೆ.
ಈ ಕುರಿತು ಸಾಮಾಜಿಕ ಮಾಧ್ಯಮ 'ಎಕ್ಸ್'ನಲ್ಲಿ ಮಾಹಿತಿ ನೀಡಿರುವ ಬೈಡನ್, 'ಭಾರತ ಪ್ರಧಾನಿಯ ಇತ್ತೀಚಿಗಿನ ಪೋಲೆಂಡ್ ಹಾಗೂ ಉಕ್ರೇನ್ ಭೇಟಿ ಕುರಿತು ನಾನು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಚರ್ಚಿಸಿದ್ದೇನೆ' ಎಂದು ಹೇಳಿದ್ದಾರೆ.
ಉಕ್ರೇನ್‌ಗೆ ಮಾನವೀಯ ನೆಲೆಯಲ್ಲಿ ಬೆಂಬಲ ಮತ್ತು ಶಾಂತಿಯ ಸಂದೇಶಕ್ಕಾಗಿ ಮೋದಿ ಅವರನ್ನು ಶ್ಲಾಘಿಸಿರುವುದಾಗಿ ಅವರು ತಿಳಿಸಿದ್ದಾರೆ.
ಇಂಡೋ-ಪೆಸಿಫಿಕ್‌ನಲ್ಲಿ ಶಾಂತಿ ಮತ್ತು ಸಮೃದ್ಧಿಗೆ ಒಟ್ಟಾಗಿ ಕೆಲಸ ಮಾಡಲು ನಮ್ಮ ಬದ್ಧತೆಯನ್ನು ಒತ್ತಿ ಹೇಳಿರುವುದಾಗಿ ಅವರು ತಿಳಿಸಿದ್ದಾರೆ.
ಬೈಡನ್ ಅವರೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿರುವ ಪ್ರಧಾನಿ ಮೋದಿ, ತಮ್ಮ ಈಚೆಗಿನ ಉಕ್ರೇನ್ ಭೇಟಿ ಕುರಿತು ವಿವರಿಸಿದ್ದಾರೆ.
'ಉಕ್ರೇನ್‌ನಲ್ಲಿನ ಪರಿಸ್ಥಿತಿ ಸೇರಿದಂತೆ ವಿವಿಧ ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳ ಕುರಿತು ಅಭಿಪ್ರಾಯಗಳನ್ನು ಹಂಚಿಕೊಂಡಿದ್ದೇವೆ. ಉಕ್ರೇನ್‌ನಲ್ಲಿ ಶಾಂತಿ ಮತ್ತು ಸ್ಥಿರತೆ ಮರಳಲು ಭಾರತದ ಸಂಪೂರ್ಣ ಬೆಂಬಲವನ್ನು ನಾನು ಬೈಡನ್ ಅವರಲ್ಲಿ ಪುನರುಚ್ಚರಿಸಿದೆ' ಎಂದು ಮೋದಿ ಅವರು 'ಎಕ್ಸ್'ನಲ್ಲಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.