ವಾಷಿಂಗ್ಟನ್: ಬಹುಬೇಡಿಕೆ ಇರುವ ಎಚ್–1ಬಿ ವೀಸಾ ಹಾಗೂ ಬಾಕಿ ಇರುವ ಗ್ರೀನ್ ಕಾರ್ಡ್‌ಗಳ ವಿತರಣೆಗೆ ಸಂಬಂಧಿಸಿದ ಪ್ರಕ್ರಿಯೆಯನ್ನು ತ್ವರಿತಗೊಳಿಸುವುದಕ್ಕೆ ಅಧ್ಯಕ್ಷ ಜೋ ಬೈಡನ್ ಆಡಳಿತವು ಸಾಧ್ಯವಿರುವ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಶ್ವೇತಭವನ ಹೇಳಿದೆ.
ಈ ವಿಷಯವನ್ನು ಆದ್ಯತೆ ಮೇಲೆ ತೆಗೆದುಕೊಂಡು, ಒಟ್ಟಾರೆ ಪ್ರಕ್ರಿಯೆಯನ್ನು ಸುಧಾರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕರೀನ್ ಜೀನ್ ಪಿಯರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
‘ಜೋ ಬೈಡನ್ ಆಡಳಿತವು ಕಾನೂನುಬದ್ಧವಾಗಿ ವಲಸೆ ಬಂದವರ ಸಮಸ್ಯೆಗಳನ್ನು ಬಗೆಹರಿಸುವ ಬದಲು ಅಕ್ರಮ ವಲಸಿಗರಿಗೆ ಹೆಚ್ಚು ಸ್ಪಂದಿಸುತ್ತಿದೆ ಎಂಬ ಭಾವನೆ ಭಾರತೀಯ ಅಮೆರಿಕನ್ನರಲ್ಲಿ ಮೂಡಿದೆ’ ಎಂಬ ಸುದ್ದಿಗಾರರ ಪ್ರಶ್ನೆಗೆ, ಪಿಯರ್ ಅವರು ಈ ಉತ್ತರ ನೀಡಿದ್ದಾರೆ.
ಎಚ್–1ಬಿ ವೀಸಾ ಎನ್ನುವುದು ವಲಸೆಯೇತರ ವೀಸಾ ಆಗಿದ್ದು, ಅಮೆರಿಕದ ಕಂಪನಿಗಳು ವಿಶೇಷ ಕೌಶಲ–ನೈಪುಣ್ಯ ಅಗತ್ಯವಿರುವ ಹುದ್ದೆಗಳಿಗೆ ವಿದೇಶಿಯರನ್ನು ನೇಮಕ ಮಾಡಿಕೊಳ್ಳಲು ಅನುವು ಮಾಡಿಕೊಡುತ್ತದೆ. ಭಾರತ ಮತ್ತು ಚೀನಾ ಅಭ್ಯರ್ಥಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಅಮೆರಿಕದ ಕಂಪನಿಗಳು ನೇಮಕ ಮಾಡಿಕೊಳ್ಳುತ್ತವೆ. ಹೀಗಾಗಿ, ಈ ವೀಸಾ ನೀಡುವ ಪ್ರಕ್ರಿಯೆಯಲ್ಲಿನ ಸುಧಾರಣೆಯಿಂದ ಭಾರತ ಮತ್ತು ಚೀನಾದ ಉದ್ಯೋಗಾಂಕ್ಷಿಗಳಿಗೆ ಹೆಚ್ಚು ಅನುಕೂಲವಾಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.