ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಸ್ಥಾನಕ್ಕೆ ಮರು ಆಯ್ಕೆ ಬಯಸಿದ್ದ ಅಧ್ಯಕ್ಷ ಜೋ ಬೈಡನ್, ಭಾನುವಾರ ಸ್ಪರ್ಧೆಯಿಂದ ಹಠಾತ್ ಹಿಂದೆ ಸರಿದಿದ್ದು, ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರನ್ನು ಅಧ್ಯಕ್ಷ ಸ್ಥಾನಕ್ಕೆ ಅಭ್ಯರ್ಥಿಯಾಗಿ ಘೋಷಿಸಿದ್ದಾರೆ.
ಕಳೆದ ವಾರ ಬೈಡನ್ ಕೋವಿಡ್‌ಗೆ ತುತ್ತಾಗಿದ್ದು, ಕ್ವಾರಂಟೈನ್‌ನಲ್ಲಿದ್ದರು. ಇದೀಗ ಅಧ್ಯಕ್ಷ ಸ್ಥಾನದ ಸ್ಪರ್ಧೆಯಿಂದ ಹಿಂದೆ ಸರಿದಿದ್ದು ಕುತೂಹಲಕ್ಕೆ ಕಾರಣವಾಗಿದೆ.
ತಮ್ಮ ಈ ನಿರ್ಧಾರದ ಬಗ್ಗೆ ಹೆಚ್ಚು ವಿವರವಾಗಿ ಮುಂದಿನ ದಿನಗಳಲ್ಲಿ ದೇಶವನ್ನು ಉದ್ದೇಶಿಸಿ ಮಾತನಾಡುವುದಾಗಿ ತಿಳಿಸಿದ್ದಾರೆ.
ಅಮೆರಿಕದ ಆಡಳಿತಾರೂಢ ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿಯಾಗಿ ಕಮಲಾ ಹ್ಯಾರಿಸ್ ಅವರ ಹೆಸರನ್ನು ಘೋಷಿಸಿರುವುದಕ್ಕೆ ಭಾರತ ಮೂಲದ ಅಮೆರಿಕನ್ ಶಾಸಕಿ ಪ್ರಮೀಳಾ ಜಯಪಾಲ್ ಸಂತಸ ವ್ಯಕ್ತಪಡಿಸಿದ್ದಾರೆ.
ನಾಲ್ಕು ಅವಧಿಗೆ ಶಾಸಕಿಯಾಗಿ ಪ್ರಮೀಳಾ ಅವರು ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ಗೆ ಆಯ್ಕೆಯಾದ ಮೊದಲ ಭಾರತೀಯ-ಅಮೆರಿಕನ್ ಮಹಿಳೆಯಾಗಿದ್ದಾರೆ. ಇವರು ಮೂಲತಃ ಚೆನ್ನೈನವರು. ಪ್ರಮೀಳಾ ಅವರನ್ನು ಡೆಮಾಕ್ರಟಿಕ್ ಪಕ್ಷದ ಶಾಸಕರಲ್ಲಿ ಪ್ರಬಲ ನಾಯಕಿ ಎಂದೇ ಪರಿಗಣಿಸಲಾಗಿದೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಪ್ರಮೀಳಾ ಜಯಪಾಲ್, ‘ಕಮಲಾ ಹ್ಯಾರಿಸ್ ಅಧ್ಯಕ್ಷರಾಗಲು ಸಂಪೂರ್ಣ ಬೆಂಬಲವಿದೆ. ಡೊನಾಲ್ಡ್ ಟ್ರಂಪ್ ಅವರನ್ನು ಮಣಿಸಿ ಹೊಸ ಇತಿಹಾಸ ನಿರ್ಮಿಸೋಣ. ಕಮಲಾ ಹ್ಯಾರಿಸ್‌ರೊಂದಿಗೆ ದೂರವಾಣಿ ಮಾತುಕತೆ ನಡೆಸಿದ್ದೇನೆ, ಅವರ ಗೆಲ್ಲುತ್ತಾರೆ ಎಂದು ಸಾವಿರ ಪ್ರತಿಷತದಷ್ಟು ನಂಬಿಕೆಯಿದೆ. ನವೆಂಬರ್‌ನಲ್ಲಿ ನಮ್ಮನ್ನು ವಿಜಯದ ಹಾದಿಯಲ್ಲಿ ಕಮಲಾ ಕೊಂಡೊಯ್ಯಲಿದ್ದಾರೆ’ ಎಂದಿದ್ದಾರೆ
ನವೆಂಬರ್ 5ರಂದು ಅಮೆರಿಕ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆಯು ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.