ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು ಶ್ವೇತಭವನದಲ್ಲಿ ದೀಪಾವಳಿ ಕಾರ್ಯಕ್ರಮ ಆಯೋಜಿಸಿದ್ದರು. ಈ ವೇಳೆ, ಭಾರತ ಮೂಲದ ಅಮೆರಿಕನ್ ಗಗನಯಾತ್ರಿ ಸುನಿತಾ ವಿಲಿಯಮ್ಸ್ ಅವರು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ(ಐಎಸ್‌ಎಸ್) ಕಳುಹಿಸಿದ್ದ ವಿಡಿಯೊ ಸಂದೇಶವನ್ನು ಪ್ರಸಾರ ಮಾಡಲಾಗಿದೆ. ವಿಡಿಯೊದಲ್ಲಿ ಬೈಡನ್ ಅವರಿಗೆ ಸುನಿತಾ ಅವರು ಧನ್ಯವಾದ ಅರ್ಪಿಸಿದ್ದು, ದೀಪಾವಳಿ ಹಬ್ಬದ ಶುಭಾಶಯವನ್ನೂ ಕೋರಿದ್ದಾರೆ.
’ಬೈಡನ್ ಅವರು ಭಾರತೀಯರೊಂದಿಗೆ ದೀಪಾವಳಿ ಆಚರಿಸಿದ್ದಾರೆ. ಈ ಮೂಲಕ, ಭಾರತೀಯರ ಕೊಡುಗೆಗಳನ್ನು ಗುರುತಿಸಿ, ಗೌರವಿಸುವ ಕೆಲಸ ಮಾಡಿದ್ದಾರೆ. ಅವರಿಗೆ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ’ ಎಂದು ಸುನಿತಾ ವಿಡಿಯೊದಲ್ಲಿ ಹೇಳಿದ್ದಾರೆ.
‘ಭೂಮಿಯಿಂದ 260 ಮೈಲುಗಳಷ್ಟು ದೂರದಲ್ಲಿ ಬಾಹ್ಯಾಕಾಶದಲ್ಲೇ ದೀಪಾವಳಿ ಹಬ್ಬ ಆಚರಿಸುವ ಸುವರ್ಣಾವಕಾಶ ನನಗೆ ಈ ಬಾರಿ ಸಿಕ್ಕಿದೆ. ಭಾರತದಿಂದ ಅಮೆರಿಕಕ್ಕೆ ವಲಸೆ ಬಂದಿದ್ದ ನನ್ನ ತಂದೆಯವರನ್ನು ಈ ಸಂದರ್ಭದಲ್ಲಿ ಸ್ಮರಿಸುತ್ತೇನೆ. ಅವರು ದೀಪಾವಳಿ ಸೇರಿ ಹಿಂದೂಗಳ ಹಬ್ಬದ ಬಗ್ಗೆ ತಿಳಿ ಹೇಳುವ ಮೂಲಕ, ನಮ್ಮಲ್ಲಿ ಭಾರತೀಯ ಸಂಸ್ಕೃತಿ ಬೇರೂರುವಂತೆ ಮಾಡಿದ್ದಾರೆ’ ಎಂದು ಹೇಳಿದ್ದಾರೆ.
ಬೈಡನ್ ಅವರು ಶ್ವೇತಭವನದಲ್ಲಿ ಸೋಮವಾರ ಆಯೋಜಿಸಿದ್ದ ದೀಪಾವಳಿ ಕಾರ್ಯಕ್ರಮದಲ್ಲಿ ವೈಸ್ ಅಡ್ಮಿರಲ್ ವಿವೇಕ್ ಎಚ್. ಮೂರ್ತಿ ಸೇರಿ ಭಾರತ ಮೂಲದ 600ಕ್ಕೂ ಅಧಿಕ ಗಣ್ಯರು ಪಾಲ್ಗೊಂಡಿದ್ದರು. ಶ್ವೇತಭವನದ ತಮ್ಮ ಕೊಠಡಿಯಲ್ಲಿ ಬೈಡನ್ ಅವರು ದೀಪ ಬೆಳಗಿಸಿದರು. ‘ಶ್ವೇತಭವನದಲ್ಲಿ ಹಿಂದೆಂದೂ ಆಚರಿಸದಷ್ಟು ಅದ್ಧೂರಿಯಾಗಿ ದೀಪಾವಳಿ ಕಾರ್ಯಕ್ರಮ ಆಯೋಜಿಸಿದ್ದಕ್ಕೆ ಹೆಮ್ಮೆಯಾಗುತ್ತಿದೆ’ ಎಂದು ಬೈಡನ್ ಹರ್ಷ ವ್ಯಕ್ತಪಡಿಸಿದ್ದಾರೆ.
ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಹಾಗೂ ಬೈಡನ್ ಪತ್ನಿ ಜಿಲ್ ಬೈಡನ್ ಅವರು ಅಧ್ಯಕ್ಷೀಯ ಚುನಾವಣೆಯ ಪ್ರಚಾರದಲ್ಲಿ ತೊಡಗಿದ್ದರಿಂದ, ದೀಪಾವಳಿ ಕಾರ್ಯಕ್ರಮಕ್ಕೆ ಗೈರಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.