ವಿಶ್ವಸಂಸ್ಥೆ: ಅಮೆರಿಕದ ಅಧ್ಯಕ್ಷ ಜೋ ಬೈಡನ್ ಅವರು ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಮುಖ್ಯ ಸಲಹೆಗಾರ ಮೊಹಮ್ಮದ್ ಯೂನಸ್ ಅವರನ್ನು ಭೇಟಿಯಾಗಿ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ.
ಈ ವೇಳೆ ಮೊಹಮ್ಮದ್ ಯೂನಸ್ ಹಾಗೂ ಬಾಂಗ್ಲಾದೇಶಕ್ಕೆ ಬೈಡನ್ ಸಂಪೂರ್ಣ ಬೆಂಬಲ ಘೋಷಿಸಿದ್ದಾರೆ.
ವಿಶ್ವಸಂಸ್ಥೆಯ ಶೃಂಗಸಭೆಯ ವೇಳೆ ಯೂನಸ್ ಹಾಗೂ ಬೈಡನ್ ಭೇಟಿ ನಡೆದಿದೆ. ವಿದ್ಯಾರ್ಥಿಗಳು ರಚಿಸಿದ ವರ್ಣಚಿತ್ರಗಳನ್ನು ಒಳಗೊಂಡ ಪುಸ್ತಕವನ್ನು ಬೈಡನ್‌ಗೆ ಯೂನಸ್ ಉಡುಗೊರೆಯಾಗಿ ನೀಡಿದರು.
ಈ ಸಂದರ್ಭದಲ್ಲಿ ಬಾಂಗ್ಲಾದೇಶದಲ್ಲಿ ನಡೆದ ಗಲಭೆ, ಹಿಂದಿನ ಪ್ರಧಾನಿ ಶೇಖ್ ಹಸೀನಾ ವಿರುದ್ಧದ ವಿದ್ಯಾರ್ಥಿಗಳ ಪ್ರತಿಭಟನೆ ಕುರಿತು ಬೈಡನ್‌ಗೆ ಯೂನಸ್ ಮಾಹಿತಿ ನೀಡಿದರು ಎಂದು ತಿಳಿದು ಬಂದಿದೆ.
ಬಾಂಗ್ಲಾದೇಶದ ಸರ್ಕಾರಿ ಉದ್ಯೋಗದಲ್ಲಿ ವಿವಾದಾತ್ಮಕ ಮೀಸಲು ವ್ಯವಸ್ಥೆಯನ್ನು ವಿರೋಧಿಸಿ ವಿದ್ಯಾರ್ಥಿಗಳು ನಡೆಸಿದ್ದ ಬೃಹತ್ ಚಳವಳಿಯು ಹಿಂಸಾಚಾರಕ್ಕೆ ತಿರುಗಿದ್ದರಿಂದ ಶೇಖ್ ಹಸೀನಾ ಅವರು ಆ.5ರಂದು ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿ ಭಾರತಕ್ಕೆ ಪರಾರಿಯಾಗಿದ್ದರು.
ಹಸೀನಾ ಪದಚ್ಯುತಿಯ ನಂತರ ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತ, 84 ವರ್ಷದ ಆರ್ಥಿಕ ತಜ್ಞ ಮೊಹಮ್ಮದ್ ಯೂನಸ್ ಆ.8ರಂದು ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಮುಖ್ಯಸ್ಥರಾಗಿ ಪ್ರಮಾಣವಚನ ಸ್ವೀಕರಿಸಿದ್ದರು.
ಬಾಂಗ್ಲಾದೇಶದಲ್ಲಿ ನಡೆದ ಹಿಂಸಾಚಾರದಲ್ಲಿ 450ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.