ADVERTISEMENT

ಅಣ್ವಸ್ತ್ರ ಕಡಿತ ಒಪ್ಪಂದ ರದ್ದು: ರಷ್ಯಾದ ದೊಡ್ಡ ತಪ್ಪು- ಜೋ ಬೈಡನ್‌

ಎಎಫ್‌ಪಿ
ರಾಯಿಟರ್ಸ್
Published 22 ಫೆಬ್ರುವರಿ 2023, 16:54 IST
Last Updated 22 ಫೆಬ್ರುವರಿ 2023, 16:54 IST
 ಜೋ ಬೈಡನ್‌
ಜೋ ಬೈಡನ್‌   

ವಾರ್ಸಾ/ಮಾಸ್ಕೊ: ಅಣ್ವಸ್ತ್ರಗಳ ಕಡಿತ ಮತ್ತು ನಿಯಂತ್ರಣ ಒಪ್ಪಂದವನ್ನು ರಷ್ಯಾ ರದ್ದುಪಡಿಸಿರುವುದು ‘ದೊಡ್ಡ ಪ್ರಮಾದ’ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಬುಧವಾರ ಹೇಳಿದ್ದಾರೆ.

ಕೀವ್‌ನಲ್ಲಿ ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ ನಂತರ ಬೈಡನ್‌ ಪೋಲೆಂಡ್‌ ರಾಜಧಾನಿ ವಾರ್ಸಾಕ್ಕೆ ಬಂದಿಳಿದರು. ವಾರ್ಸಾದ ಡೌನ್‌ಟೌನ್‌ನಲ್ಲಿ ಸಹಸ್ರಾರು ಜನರನ್ನು ಉದ್ದೇಶಿ ಮಾತನಾಡಿದ ಅವರು, ರಷ್ಯಾ ಅಧ್ಯಕ್ಷ, ಸರ್ವಾಧಿಕಾರಿ ಪುಟಿನ್‌ ಅವರನ್ನು ವಿರೋಧಿಸುವಂತೆ ಕರೆ ನೀಡಿದರು.

ನ್ಯಾಟೊ ಪೂರ್ವ ರಾಷ್ಟ್ರಗಳ ನಾಯಕರನ್ನು ಬುಧವಾರ ಭೇಟಿ ಮಾಡಿದ ಬೈಡನ್‌, ಒಗ್ಗಟ್ಟಿನ ಸಂದೇಶ ರವಾನಿಸುವ ಪ್ರಯತ್ನ ಮಾಡಿದರು.

ADVERTISEMENT

ರಷ್ಯಾ ಮತ್ತು ಅಮೆರಿಕ ನಡುವೆ 2010ರಲ್ಲಿ ಶಸ್ತ್ರಾಸ್ತ್ರ ನಿಯಂತ್ರಣ ಒಪ್ಪಂದದಿಂದ (ನ್ಯೂ ಸ್ಟಾರ್ಟ್‌) ಮಂಗಳವಾರ ಹಿಂದೆ ಸರಿದ ಪುಟಿನ್‌, ಅಣ್ವಸ್ತ್ರ ಪರೀಕ್ಷೆಗಳನ್ನು ರಷ್ಯಾ ಪುನರಾರಂಭಿಸಬಹುದು ಎಂದು ಎಚ್ಚರಿಕೆ ನೀಡಿದ್ದರು.

‘ಐತಿಹಾಸಿಕ ನೆಲಕ್ಕಾಗಿ ಹೋರಾಟ’: ‘ನಮ್ಮ ಐತಿಹಾಸಿಕ ಭೂಮಿಯನ್ನು ಮರಳಿ ಪಡೆಯುವ ಮತ್ತು ನಮ್ಮ ಜನರ ರಕ್ಷಣೆಗಾಗಿ ನಾವು ಉಕ್ರೇನ್‌ನಲ್ಲಿ ಹೋರಾಟ ನಡೆಸುತ್ತಿದ್ದೇವೆ’ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಹೇಳಿದ್ದಾರೆ.

ಉಕ್ರೇನ್‌ ಮೇಲಿನ ಆಕ್ರಮಣ ಬೆಂಬಲಿಸಿ ಬುಧವಾರ ಮಾಸ್ಕೊದಲ್ಲಿ ಸರ್ಕಾರ ಆಯೋಜಿಸಿದ್ದ ದೇಶಭಕ್ತಿಯ ರ‍್ಯಾಲಿ ಉದ್ದೇಶಿಸಿ ಮಾತನಾಡಿದ ಅವರು, ‘ರಷ್ಯಾ ಸೈನಿಕರು ಆತ್ಮವಿಶ್ವಾಸ, ಧೈರ್ಯದಿಂದ ಹೋರಾಡುತ್ತಿದ್ದಾರೆ. ನಾವು ಅವರ ಬಗ್ಗೆ ಹೆಮ್ಮೆಪಡುತ್ತೇವೆ’ ಎಂದರು.

ಇದೇ ವೇಳೆ ಪುಟಿನ್‌ ಅವರು ಮಾಸ್ಕೊದಲ್ಲಿ ಚೀನಾದ ಉನ್ನತ ರಾಜತಾಂತ್ರಿಕ ವಾಂಗ್‌ ಯಿ ಅವರ ಜತೆಗೆ ಮಾತುಕತೆ ನಡೆಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.