ವಾಷಿಂಗ್ಟನ್: ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹಾಲಿ ಅಧ್ಯಕ್ಷ ಜೊ ಬೈಡನ್ ಅವರನ್ನು ಶ್ವೇತಭವನದಲ್ಲಿ ಭೇಟಿಯಾಗಿದ್ದಾರೆ. ಸಾರ್ವಜನಿಕವಾಗಿ ಕಾಣಿಸಿಕೊಂಡಾಗ 29 ಸೆಕೆಂಡ್‌ಗಳ ಕಾಲ ಗೌರವಿಸುವಂತೆ ತೋರ್ಪಡಿಸಿದರು.
ಸಂಪ್ರದಾಯದಂತೆ ಹಾಲಿ ಅಧ್ಯಕ್ಷರು ಹೊಸ ಅಧ್ಯಕ್ಷರಿಗೆ ಅಧಿಕಾರವನ್ನು ಹಸ್ತಾಂತರಿಸುವ ಸಂಬಂಧ ಸಭೆ ನಡೆಯಿತು. ಸಭೆಯಲ್ಲಿ, ಉಭಯ ನಾಯಕರು 2025ರ ಜನವರಿ 20 ರಂದು ಶಾಂತಿಯುತ ಅಧಿಕಾರ ಹಸ್ತಾಂತರದ ಭರವಸೆ ನೀಡಿದರು.
‘ಚುನಾಯಿತ ಅಧ್ಯಕ್ಷರಿಗೆ ಅಭಿನಂದನೆಗಳು, ಅಧಿಕಾರವನ್ನು ಸುಗಮವಾಗಿ ಹಸ್ತಾಂತರಿಸಲು ಎದುರು ನೋಡುತ್ತಿದ್ದೇನೆ’ ಎಂದು ಬೈಡನ್ ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಟ್ರಂಪ್, ‘ರಾಜಕೀಯ ಕಠಿಣ ಹಾದಿ, ಅನೇಕ ಸಂದರ್ಭಗಳಲ್ಲಿ ರಾಜಕೀಯ ಸುಂದರವಾದ ಜಗತ್ತಾಗಿರುವುದಿಲ್ಲ. ಆದರೆ ಇಂದಿನ ದಿನಗಳಲ್ಲಿ ರಾಜಕೀಯ ಉತ್ತಮವಾಗಿದೆ. ಅದಕ್ಕೆ ಪ್ರಶಂಸಿಸುತ್ತೇನೆ. ಅಧಿಕಾರ ಹಸ್ತಾಂತರ ಸುಗಮವಾಗಿರಲಿದೆ’ ಎಂದಿದ್ದಾರೆ.
ಅಧ್ಯಕ್ಷರಾಗಿ ಆಯ್ಕೆಯಾದ ಟ್ರಂಪ್ ಅವರನ್ನು ಪ್ರಥಮ ಮಹಿಳೆ ಜಿಲ್ ಬೈಡನ್ ಮತ್ತು ಹಾಲಿ ಅಧ್ಯಕ್ಷ ಬೈಡನ್ ಸ್ವಾಗತಿಸಿದರು. ಬಳಿಕ ಟ್ರಂಪ್ ಮತ್ತು ಅವರ ಪತ್ನಿಗೆ ಕೈಬರಹದ ಅಭಿನಂದನಾ ಪತ್ರವನ್ನು ನೀಡಿದರು.
ಎರಡು ವಾರಗಳ ಹಿಂದೆ ಬೈಡನ್‌ರನ್ನು, ದುರ್ಬಲ, ಅಸ್ವಸ್ಥ, ಬುದ್ಧಿಮಾಂದ್ಯ ಎಂದು ಟ್ರಂಪ್ ಅಪಹಾಸ್ಯ ಮಾಡಿದ್ದರು. ಆದರೆ ಬುಧವಾರ ಅವರನ್ನು ಭೇಟಿಯಾದಾಗ ‘ಜೋ’ ಎಂದು ಸಂಬೋಧಿಸಿ, ಆತಿಥ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು ಎಂದು ವರದಿಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.