ADVERTISEMENT

ಇರಾನ್‌ ಪೋಷಿತ ಉಗ್ರ ಸಂಘಟನೆ ಮೇಲೆ ದಾಳಿಗೆ ಬೈಡನ್‌ ಆದೇಶ

ಏಜೆನ್ಸೀಸ್
Published 26 ಡಿಸೆಂಬರ್ 2023, 13:55 IST
Last Updated 26 ಡಿಸೆಂಬರ್ 2023, 13:55 IST
ಜೋ ಬೈಡನ್‌
ಜೋ ಬೈಡನ್‌   

(ಸಂಗ್ರಹ ಚಿತ್ರ)

ವಾಷಿಂಗ್ಟನ್: ಉತ್ತರ ಇರಾಕ್‌ನಲ್ಲಿ ನಡೆದ ಡ್ರೋನ್ ದಾಳಿಯಲ್ಲಿ ಅಮೆರಿಕದ ಮೂವರು ಸೇನಾ ಸಿಬ್ಬಂದಿ ಗಾಯಗೊಂಡಿದ್ದಕ್ಕೆ ಪ್ರತೀಕಾರವಾಗಿ ಇರಾನ್‌ ಪೋಷಿತ ಭಯೋತ್ಪಾದಕ ಸಂಘಟನೆ ವಿರುದ್ಧ ದಾಳಿ ನಡೆಸುವಂತೆ ಅಮೆರಿಕ ಸೇನೆಗೆ ಅಧ್ಯಕ್ಷ ಜೋ ಬೈಡನ್‌ ಆದೇಶಿಸಿದ್ದಾರೆ.

ಇದರ ಬೆನ್ನಲ್ಲೇ ರಕ್ಷಣಾ ಕಾರ್ಯದರ್ಶಿ ಲಾಯ್ಡ್‌ ಆಸ್ಟಿನ್‌ ಮತ್ತು ಬೈಡನ್ ಅವರ ರಾಷ್ಟ್ರೀಯ ಭದ್ರತಾ ತಂಡವು, ದಾಳಿಯ ರೂಪುರೂಷೆಗಳನ್ನು ಒಳಗೊಂಡ ಯೋಜನೆಯನ್ನು ಬೈಡನ್ ಅವರ ಎದುರು ಪ್ರಸ್ತುತ ಪಡಿಸಿತು. ಭಯೋತ್ಪಾದಕ ಸಂಘಟನೆಯ ಮೂರು ನೆಲೆಗಳ ಮೇಲೆ ದಾಳಿ ನಡೆಸಲು ಬೈಡನ್‌ ಆದೇಶಿಸಿದರು. ಬಳಿಕ ಮಂಗಳವಾರ ಮುಂಜಾನೆ 4.45ರ ಸುಮಾರಿಗೆ ಇರಾಕ್‌ನಲ್ಲಿ ಅಮೆರಿಕ ವಾಯುದಾಳಿ ನಡೆಸಿತು.

ADVERTISEMENT

‘ಅಮೆರಿಕ ನಡೆಸಿದ ದಾಳಿಯಲ್ಲಿ ಒಬ್ಬ ಉಗ್ರ ಮೃತಪಟ್ಟಿದ್ದು, 18 ಮಂದಿ ಗಾಯಗೊಂಡಿದ್ದಾರೆ’ ಎಂದು ಇರಾಕ್‌ನ ಅಧಿಕಾರಿಗಳು ತಿಳಿಸಿದ್ದಾರೆ.

ರಾಷ್ಟ್ರೀಯ ಭದ್ರತಾ ಮಂಡಳಿ ವಕ್ತಾರೆ ಆಡ್ರಿಯೆನ್ ವ್ಯಾಟ್ಸನ್ ಅವರು, ‘ಸೋಮವಾರ ನಡೆದ ದಾಳಿಯಲ್ಲಿ ಅಮೆರಿಕದ ಸೇನಾ ಸಿಬ್ಬಂದಿಯೊಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ’ ಎಂದು ತಿಳಿಸಿದ್ದಾರೆ.

ಇರಾನ್‌ ಬೆಂಬಲಿತ ಕತೈಬ್‌ ಹೆಜ್ಬುಲ್ಲಾ ಸಂಘಟನೆ ದಾಳಿಯ ಹೊಣೆ ಹೊತ್ತಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.