ಶಿಕಾಗೊ: ‘ಕಮಲಾ ಹ್ಯಾರಿಸ್ ಅಮೆರಿಕದ ‘ಐತಿಹಾಸಿಕ ಅಧ್ಯಕ್ಷೆ’ ಆಗಲಿದ್ದಾರೆ’ ಎಂದು ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ.
ಸೋಮವಾರ ರಾತ್ರಿ ಇಲ್ಲಿ ನಡೆದ ಡೆಮಾಕ್ರಟಿಕ್ ಪಕ್ಷದ ರಾಷ್ಟ್ರೀಯ ಸಮಾವೇಶದಲ್ಲಿ ಕಮಲಾ ಅವರಿಗೆ ಪಕ್ಷದ ಉತ್ತರಾಧಿಕಾರ ಹಸ್ತಾಂತರಿಸಿದ ಬೈಡನ್, ‘ಪ್ರಜಾಪ್ರಭುತ್ವವನ್ನು ಉಳಿಸಲು ಕಮಲಾ ಅವರನ್ನು ಬೆಂಬಲಿಬೇಕು’ ಎಂದು ಮತದಾರರಿಗೆ ಮನವಿ ಮಾಡಿದರು.
ಸಮಾವೇಶದ ವೇದಿಕೆಗೆ 81 ವರ್ಷ ವಯಸ್ಸಿನ ಬೈಡನ್ ಬಂದಾಗ, ಎಲ್ಲರೂ ಎದ್ದುನಿಂತು ಗೌರವ ಸಲ್ಲಿಸುವ ಮೂಲಕ ಭಾವನಾತ್ಮವಾಗಿ ಬರಮಾಡಿಕೊಂಡರು.
59 ವರ್ಷದ ಕಮಲಾ ಹ್ಯಾರಿಸ್ ಅವರು ಅಧ್ಯಕ್ಷೀಯ ಚುನಾವಣೆಗೆ ಪಕ್ಷದ ಅಭ್ಯರ್ಥಿಯಾಗಿ ಗುರುವಾರ ಅಧಿಕೃತವಾಗಿ ನಾಮನಿರ್ದೇಶಿತರಾಗುವರು. ಈ ಮೂಲಕ ನ. 5ರ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಅವರಿಗೆ ಮುಖಾಮುಖಿ ಆಗಲಿದ್ದಾರೆ.
‘ಅಮೆರಿಕ ಅಧ್ಯಕ್ಷೆಯಾಗಿ ಕಮಲಾ ಹ್ಯಾರಿಸ್ ಅವರನ್ನು ಚುನಾಯಿಸಲು ನೀವು ಸಿದ್ಧರಿದ್ದೀರಾ’ ಎಂದು ಬೈಡನ್ ಪ್ರಶ್ನಿಸಿದರು. ಸಮಾವೇಶದಲ್ಲಿ ಭಾಗಿಯಾಗಿದ್ದ ಸಾವಿರಾರು ಜನರು ಇದಕ್ಕೆ ಕರತಾಡನದ ಮೂಲಕ ಇದಕ್ಕೆ ಬೆಂಬಲ ವ್ಯಕ್ತಪಡಿಸಿದರು.
‘ನಾವು ಪ್ರಜಾಪ್ರಭುತ್ವವನ್ನು ರಕ್ಷಿಸಬೇಕಿದೆ. ಅದಕ್ಕಾಗಿ ಡೊನಾಲ್ಡ್ ಟ್ರಂಪ್ ಅವರನ್ನು ಸೋಲಿಸಬೇಕಿದೆ. ಟ್ರಂಪ್ ಈ ಚುನಾವಣೆಯಲ್ಲಿ ಮಹಿಳಾ ಶಕ್ತಿಯನ್ನು ಕಾಣಲಿದ್ದಾರೆ. ಕಮಲಾ ಅಮೆರಿಕದ 47ನೇ ಅಧ್ಯಕ್ಷರಾಗುವುದು ನಿಶ್ಚಿತ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
‘ನಾವು ಒಟ್ಟಾಗಿ 2020ರಲ್ಲಿ ಪ್ರಜಾಪ್ರಭುತ್ವವನ್ನು ರಕ್ಷಿಸಿದ್ದೆವು. 2024ರಲ್ಲಿಯೂ ಅದನ್ನು ಪುನರಾವರ್ತನೆ ಮಾಡಬೇಕಿದೆ’ ಎಂದರು.
ಭಾವುಕರಾಗಿದ್ದ ಬೈಡನ್ ಅವರು ಸಮಾವೇಶದಲ್ಲಿ ತಮ್ಮನ್ನು ಪರಿಚಯಿಸಿದ ಪುತ್ರಿ ಆ್ಯಶ್ಲೆ ಬೈಡನ್ ಅವರನ್ನು ಒದ್ದೆ ಕಣ್ಣುಗಳನ್ನು ಒರೆಸಿಕೊಳ್ಳುತ್ತಲೇ ಅಪ್ಪಿಕೊಂಡರು.
ಅಮೆರಿಕವನ್ನು ಮುನ್ನಡೆಸುವ ವ್ಯಕ್ತಿತ್ವ ಅನುಭವ ದೂರದೃಷ್ಟಿ ಕಮಲಾ ಹ್ಯಾರಿಸ್ ಅವರಿಗಿದೆ. ಆಕೆಯ ಹೃದಯವಂತಿಕೆ ಬದ್ಧತೆ ನನಗೆ ಗೊತ್ತಿದೆ.-ಹಿಲರಿ ಕ್ಲಿಂಟನ್, 2016ರ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್ ವಿರುದ್ಧ ಸೋತಿದ್ದ ಅಭ್ಯರ್ಥಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.