ವಾಷಿಂಗ್ಟನ್: ಕೋವಿಡ್‌ನಿಂದ ಚೇತರಿಸಿಕೊಳ್ಳುತ್ತಿದ್ದೇನೆ. ‘ಪ್ರಜಾಪ್ರಭುತ್ವ’ವನ್ನು ಉಳಿಸುವುದಕ್ಕಾಗಿ ಮುಂದಿನ ವಾರ ಚುನಾವಣಾ ಪ್ರಚಾರಕ್ಕೆ ಮರಳುತ್ತೇನೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ.
ಮಿಲ್ವಾಕೀಯಲ್ಲಿ ನಡೆಯುತ್ತಿರುವ ರಿಪಬ್ಲಿಕನ್ ಪಕ್ಷದ ರಾಷ್ಟ್ರೀಯ ಸಮಾವೇಶದಲ್ಲಿ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾಡಿರುವ ಭಾಷಣವನ್ನು ಕೇಳಿದ್ದೇನೆ. ಅವರು ‘ಭವಿಷ್ಯದ ಬಗ್ಗೆ ಕರಾಳ ದೃಷ್ಟಿ’ಯನ್ನು ಹೊಂದಿರುವುದು ಸ್ಪಷ್ಟವಾಗಿದೆ ಎಂದು ಬೈಡನ್ ಟೀಕಿಸಿದ್ದಾರೆ.
‘ಅಮೆರಿಕನ್ನರು ನಾಲ್ಕು ವರ್ಷಗಳ ಹಿಂದೆ ತಿರಸ್ಕರಿಸಿದ ಅದೇ ಡೊನಾಲ್ಡ್ ಟ್ರಂಪ್ ಅವರನ್ನು ಮತ್ತೊಮ್ಮೆ ನೋಡಿದ್ದಾರೆ. ಅವರ (ಟ್ರಂಪ್) 90 ನಿಮಿಷಗಳ ಭಾಷಣವು ತಮ್ಮದೇ ಆದ ಕುಂದುಕೊರತೆಗಳ ಮೇಲೆ ಕೇಂದ್ರೀಕರಿಸಿವೆ. ಜನರನ್ನು ಒಗ್ಗೂಡಿಸುವ ಮತ್ತು ದುಡಿಯುವ ಜನರ ಜೀವನ ಸುಧಾರಿಸುವಂತಹ ಯಾವುದೇ ಯೋಜನೆಗಳನ್ನು ರೂಪಿಸುವುದಿಲ್ಲ’ ಎಂದು ಬೈಡನ್ ಗುಡುಗಿದ್ದಾರೆ.
ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸದಂತೆ ಹಾಲಿ ಅಧ್ಯಕ್ಷ ಜೋ ಬೈಡನ್ ಅವರ ಮೇಲೆ ಡೆಮಾಕ್ರಟಿಕ್ ಪಕ್ಷದ ನಾಯಕರೇ ಒತ್ತಡ ಹಾಕುತ್ತಿದ್ದಾರೆ. ಇದರ ನಡುವೆಯೂ ನವೆಂಬರ್‌ನಲ್ಲಿ ಟ್ರಂಪ್ ಅವರನ್ನು ಮತ್ತೆ ಸೋಲಿಸುತ್ತೇನೆ ಎಂದು ಹೇಳಿಕೊಂಡಿದ್ದಾರೆ.
‘ಸಂಕಷ್ಟದ ಈ ಹೊತ್ತಿನಲ್ಲಿ ಎಲ್ಲ ಅಮೆರಿಕನ್ನರು ಒಗ್ಗಟ್ಟನ್ನು ಕಾಯ್ದುಕೊಳ್ಳಬೇಕು. ನವೆಂಬರ್ 5ರಂದು ನಡೆಯುವ ಅಧ್ಯಕ್ಷೀಯ ಚುನಾವಣೆಯಲ್ಲಿ ನನ್ನನ್ನು ಆಯ್ಕೆ ಮಾಡಬೇಕು. ಗೆದ್ದು ಬಂದರೆ ಉತ್ತಮ ಆಡಳಿತ ನೀಡುತ್ತೇನೆ’ ಎಂದು ಶುಕ್ರವಾರ ಡೊನಾಲ್ಡ್ ಟ್ರಂಪ್ ವಾಗ್ದಾನ ನೀಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.