ADVERTISEMENT

ಜೋರ್ಡಾನ್‌ನಲ್ಲಿ ಅಮೆರಿಕದ 3 ಸೈನಿಕರ ಸಾವು: ತಕ್ಕ ಪ್ರತ್ಯುತ್ತರ ಎಂದ ಬೈಡೆನ್

​ಪ್ರಜಾವಾಣಿ ವಾರ್ತೆ
Published 29 ಜನವರಿ 2024, 13:55 IST
Last Updated 29 ಜನವರಿ 2024, 13:55 IST
ಜೋ ಬೈಡೆನ್
ಜೋ ಬೈಡೆನ್   

ಕೊಲಂಬಿಯ, ಅಮೆರಿಕ: ‘ಜೋರ್ಡಾನ್‌ನಲ್ಲಿ ಅಮೆರಿಕದ ಸೇನಾ ನೆಲೆ ಮೇಲೆ ಡ್ರೋನ್‌ ದಾಳಿ ನಡೆಸಿದವರಿಗೆ ತಕ್ಕ ಪ್ರತ್ಯುತ್ತರ ನೀಡುತ್ತೇವೆ’ ಎಂದು ಅಮೆರಿಕದ ಅಧ್ಯಕ್ಷ ಜೋ ಬೈಡನ್‌ ಎಚ್ಚರಿಸಿದ್ದಾರೆ. 

ಸಿರಿಯಾ– ಜೋರ್ಡಾನ್‌ ಗಡಿ ಸಮೀಪ ಭಾನುವಾರ ರಾತ್ರಿ ನಡೆದ ಡ್ರೋನ್‌ ದಾಳಿಯಲ್ಲಿ ಅಮೆರಿಕದ ಮೂವರು ಯೋಧರು ಮೃತಪಟ್ಟಿದ್ದರು. ಇರಾನ್ ಬೆಂಬಲಿತ ಬಂಡುಕೋರರು ದಾಳಿ ನಡೆಸಿದ್ದಾರೆ ಎಂದು ಬೈಡನ್‌ ಆರೋಪಿಸಿದ್ದಾರೆ.

‘ಕಳೆದ (ಭಾನುವಾರ) ರಾತ್ರಿ ಮಧ್ಯ ಪ್ರಾಚ್ಯದಲ್ಲಿ ನಮ್ಮ ಸೇನಾ ನೆಲೆಯ ಮೇಲೆ ನಡೆದ ಡ್ರೋನ್‌ ದಾಳಿಯಲ್ಲಿ ಮೂವರು ಸೈನಿಕರನ್ನು ಕಳೆದುಕೊಂಡಿದ್ದೇವೆ. ಈ ದಾಳಿಗೆ ತಕ್ಕ ರೀತಿಯಲ್ಲಿ ಪ್ರತ್ಯುತ್ತರ ನೀಡಲಿದ್ದೇವೆ’ ಎಂದು ದಕ್ಷಿಣ ಕರೊಲಿನಾ ಪ್ರವಾಸದಲ್ಲಿರುವ ಬೈಡನ್‌ ಹೇಳಿದ್ದಾರೆ. 

ADVERTISEMENT

‘ನಮ್ಮ ಯೋಧರು ಮತ್ತು ದೇಶದ ಹಿತಾಸಕ್ತಿಯನ್ನು ಕಾಪಾಡಲು ಎಲ್ಲ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ’ ಎಂದು ಅಮೆರಿಕದ ರಕ್ಷಣಾ ಕಾರ್ಯದರ್ಶಿ ಲಾಯ್ಡ್‌ ಆಸ್ಟಿನ್‌ ತಿಳಿಸಿದ್ದಾರೆ.

ಭಾನುವಾರ ರಾತ್ರಿ ನಡೆದ ಡ್ರೋನ್‌ ದಾಳಿಯಲ್ಲಿ 34 ಯೋಧರು ಗಾಯಗೊಂಡಿದ್ದರು. ಗಂಭೀರವಾಗಿ ಗಾಯಗೊಂಡಿರುವ ಎಂಟು ಮಂದಿಯನ್ನು ಚಿಕಿತ್ಸೆಗಾಗಿ ಜೋರ್ಡಾನ್‌ನಿಂದ ಬೇರೆ ಕಡೆಗೆ ಕರೆದೊಯ್ಯಲಾಗಿದೆ ಎಂದು ಅಮೆರಿಕ ಸೇನೆಯ ಮೂಲಗಳು ತಿಳಿಸಿವೆ.

ಇಸ್ರೇಲ್‌– ಹಮಾಸ್‌ ಯುದ್ಧ ಆರಂಭವಾದ ಬಳಿಕ ಜೋರ್ಡಾನ್‌ನಲ್ಲಿ ಅಮೆರಿಕದ ಸೈನಿಕರನ್ನು ಗುರಿಯಾಗಿಸಿ ನಡೆದ ಮೊದಲ ದಾಳಿ ಇದು. 

ಆರೋಪ ಅಲ್ಲಗಳೆದ ಇರಾನ್: ಡ್ರೋನ್ ದಾಳಿಯ ಹಿಂದೆ ಇರಾನ್‌ ಕೈವಾಡವಿದೆ ಎಂದು ಅಮೆರಿಕ ಮಾಡಿರುವ ಆರೋಪವನ್ನು ಇರಾನ್‌ ವಿದೇಶಾಂಗ ಸಚಿವಾಲಯ ತಳ್ಳಿಹಾಕಿದೆ. 

‘ಪ್ಯಾಲೆಸ್ಟೀನ್‌ ಮತ್ತು ಅಲ್ಲಿನ ಜನರ ಹಿತಾಸಕ್ತಿ ಕಾಪಾಡಲು ಹೋರಾಟ ನಡೆಸುತ್ತಿರುವ ಬಂಡುಕೋರ ಗುಂಪುಗಳು ತೆಗೆದುಕೊಳ್ಳುವ ನಿರ್ಧಾರಗಳಲ್ಲಿ ಇರಾನ್‌ನ ಯಾವುದೇ ಪಾತ್ರವಿಲ್ಲ’ ಎಂದು ಸಚಿವಾಲಯದ ವಕ್ತಾರ ನಾಸೆರ್‌ ಕನಾನಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.