ADVERTISEMENT

ಹೌತಿ ವಿರುದ್ಧ ಇನ್ನಷ್ಟು ದಾಳಿ: ಬೈಡೆನ್‌

ಏಜೆನ್ಸೀಸ್
Published 19 ಜನವರಿ 2024, 16:05 IST
Last Updated 19 ಜನವರಿ 2024, 16:05 IST
ಜೋ ಬೈಡನ್‌
ಜೋ ಬೈಡನ್‌   

ವಾಷಿಂಗ್ಟನ್ (ಎಪಿ): ಯೆಮೆನ್‌ನಲ್ಲಿನ ಇರಾನ್‌ ಬೆಂಬಲಿತ ಹೌತಿ ಬಂಡುಕೋರರ ವಿರುದ್ಧ ದಾಳಿ ಮುಂದುವರಿಯಲಿದೆ ಎಂದು ಅಧ್ಯಕ್ಷ ಜೋ ಬೈಡೆನ್‌ ಗುರುವಾರ ಹೇಳಿದ್ದಾರೆ.

ಉತ್ತರ ಕರೊಲಿನಾದಲ್ಲಿ ದೇಶೀಯ ನೀತಿಯ ಬಗ್ಗೆ ಭಾಷಣ ಮಾಡಲು ಅವರು ಶ್ವೇತಭವನದಿಂದ ಹೊರಡುವ ಮೊದಲು ವರದಿಗಾರರೊಂದಿಗೆ ಮಾತನಾಡಿ, ಹೌತಿ ನೆಲೆಗಳ ಮೇಲೆ ಅಮೆರಿಕ ಸೇನೆಯು ದಾಳಿ ಮುಂದುವರಿಸಲಿದೆ ಎಂದು ಹೇಳಿದ್ದಾರೆ.

ಆದರೆ, ಜಾಗತಿಕ ಸರಕು ಸಾಗಣೆ ವ್ಯವಸ್ಥೆಗೆ ಧಕ್ಕೆ ತಂದಿರುವ, ಕೆಂಪು ಸಮುದ್ರದಲ್ಲಿ ಹಡಗುಗಳ ಮೇಲಿನ ಹೌತಿ ಬಂಡುಕೋರರ ದಾಳಿಯನ್ನು ಅಮೆರಿಕ ಮತ್ತು ಬ್ರಿಟನ್‌ ಜಂಟಿಯಾಗಿ ಹೌತಿ ನೆಲೆಗಳ ಮೇಲೆ ಇತ್ತೀಚೆಗೆ ನಡೆಸಿದ ಬಾಂಬ್ ದಾಳಿಯಿಂದಲೂ ನಿಗ್ರಹಿಸಲಾಗಿಲ್ಲ ಎನ್ನುವುದನ್ನು ಬೈಡೆನ್‌ ಒಪ್ಪಿಕೊಂಡರು.

ADVERTISEMENT

ಯೆಮೆನ್‌ನಲ್ಲಿನ ಮತ್ತೊಂದು ಕ್ಷಿಪಣಿ ಉಡಾವಣಾ ತಾಣದ ಮೇಲೆ ಗುರುವಾರ ಬೆಳಿಗ್ಗೆ ಅಮೆರಿಕ ಸೇನೆ ಐದನೇ ದಾಳಿ ನಡೆಸಿದೆ ಎಂದು ಹೆಸರು ಬಹಿರಂಗಪಡಿಸಲು ಬಯಸದ ಅಮೆರಿಕದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಯೆಮೆನ್‌ನಲ್ಲಿ ಹೌತಿ ಬಂಡುಕೋರರ ನೆಲೆಗಳ ಮೇಲೆ ಯುದ್ಧನೌಕೆ ಮತ್ತು ಜಲಾಂತರ್ಗಾಮಿ ನೌಕೆಗಳಿಂದ ಅಮೆರಿಕ ಸೇನೆ ಬುಧವಾರ ಕ್ಷಿಪಣಿಗಳ ದಾಳಿ ನಡೆಸಿತ್ತು. ನಾಲ್ಕನೇ ದಾಳಿಯಲ್ಲಿ ಹೌತಿ ಬಂಡುಕೋರರು ಉಡಾವಣೆಗೆ ಸಜ್ಜಾಗಿರಿಸಿದ್ದ ಇರಾನ್‌ ನಿರ್ಮಿತ 14 ಕ್ಷಿಪಣಿಗಳನ್ನು ಧ್ವಂಸಗೊಳಿಸಲಾಯಿತು ಎಂದು ಕೇಂದ್ರ ಕಮಾಂಡ್‌ ಬುಧವಾರ ‘ಎಕ್ಸ್‌’ನಲ್ಲಿ ಹೇಳಿಕೆ ಬಿಡುಗಡೆ ಮಾಡಿತ್ತು.

‘ಈ ದಾಳಿಗಳು ಎಲ್ಲಿಯವರೆಗೆ ನಡೆಯುವ ಅಗತ್ಯವಿದೆಯೇ ಅಲ್ಲಿಯವರೆಗೆ ಮುಂದುವರಿಯಲಿವೆ’ ಎಂದು ರಾಷ್ಟ್ರೀಯ ಭದ್ರತಾ ಮಂಡಳಿ ವಕ್ತಾರ ಜಾನ್‌ ಕಿರ್ಬಿ ಗುರುವಾರ ತಿಳಿಸಿದರು.

ಅಮೆರಿಕ ಮತ್ತು ಅದರ ಮಿತ್ರರಾಷ್ಟ್ರಗಳು ಕೆಂಪು ಸಮುದ್ರದಲ್ಲಿ ಹಡಗು ಸಂಚಾರ ಸುರಕ್ಷಿತಗೊಳಿಸಲು ‘ಆಪರೇಷನ್ ಪ್ರಾಸ್ಪರಿಟಿ ಗಾರ್ಡಿಯನ್’ ರಚಿಸಿಕೊಂಡಿವೆ. ಪ್ರಸ್ತುತ, ಅಮೆರಿಕ, ಫ್ರಾನ್ಸ್ ಮತ್ತು ಬ್ರಿಟನ್‌ನ ಯುದ್ಧನೌಕೆಗಳು ಈ ಪ್ರದೇಶದಲ್ಲಿ ಗಸ್ತು ತಿರುಗುತ್ತಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.