ವಾಷಿಂಗ್ಟನ್: ಮುಂದಿನ ವಾರ ನಡೆಯಲಿರುವ ಕ್ವಾಡ್ ಶೃಂಗಸಭೆಗೆ ಅಮೆರಿಕ ಆತಿಥ್ಯ ವಹಿಸಲಿದೆ. ಅಮೆರಿಕದ ಅಧ್ಯಕ್ಷ ಜೋ ಬೈಡನ್ ಅವರ ಡೆಲವೇರ್ ನಿವಾಸದಲ್ಲಿ ಶೃಂಗಸಭೆ ಆಯೋಜಿಸಲಾಗುವುದು ಎಂದು ಶ್ವೇತ ಭವನದ ವಕ್ತಾರರು ತಿಳಿಸಿದ್ದಾರೆ.
ಕ್ವಾಡ್ ಸದಸ್ಯ ರಾಷ್ಟ್ರಗಳಾದ ಭಾರತ, ಆಸ್ಟ್ರೇಲಿಯಾ ಮತ್ತು ಜಪಾನ್ ದೇಶಗಳ ನಾಯಕರು ಈ ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ತಮ್ಮ ಅಧಿಕಾರದ ಅವಧಿಯ ಕೊನೆಯ ಹಂತದಲ್ಲಿರುವ ಅಮೆರಿಕ ಅಧ್ಯಕ್ಷ ಜೋ ಬೈಡನ್ ಕಾರ್ಯತತ್ಪರತೆಯಿಂದ ಸೆಪ್ಟೆಂಬರ್ 21ರಂದು ಕ್ವಾಡ್ ಶೃಂಗಸಭೆ ಆಯೋಜಿಸಲು ಮುಂದಾಗಿದ್ದಾರೆ. ಇದರಿಂದ ಈ ವರ್ಷ ಭಾರತದಲ್ಲಿ ಯೋಜಿಸಲಾಗಿದ್ದ ಕ್ವಾಡ್ ಶೃಂಗಸಭೆಯು ಮುಂದಿನ ವರ್ಷ ನಡೆಯಲಿದೆ.
ಬಹುನಿರೀಕ್ಷಿತ ಕ್ವಾಡ್ ಶೃಂಗಸಭೆಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ, ಆಸ್ಟ್ರೇಲಿಯಾದ ಪ್ರಧಾನಿ ಅಂಥೋನಿ ಅಲ್ಬನೀಸ್ ಮತ್ತು ಜಪಾನ್ ಕಿಶಿಡಾ ಫ್ಯೂಮಿಯೊ ಅವರು ಭಾಗವಹಿಸುವ ನಿರೀಕ್ಷೆ ಇದ್ದು, ಅವರೆಲ್ಲರನ್ನು ಬರಮಾಡಿಕೊಳ್ಳಲು ಅಮೆರಿಕ ಅಧ್ಯಕ್ಷ ಜೋ ಬೈಡನ್ ಉತ್ಸುಕರಾಗಿದ್ದಾರೆ ಎಂದು ಶ್ವೇತ ಭವನದ ಮಾಧ್ಯಮ ಕಾರ್ಯದರ್ಶಿ ತಿಳಿಸಿದ್ದಾರೆ.
ಅಧ್ಯಕ್ಷರಾದ ಬಳಿಕ ಮೊದಲ ಬಾರಿಗೆ ಡೆಲವೇರ್‌ನ ವಿಲ್ಮಿಂಗ್ಟನ್‌ನ ನಿವಾಸದಲ್ಲಿ ಕ್ವಾಡ್ ನಾಯಕರಿಗೆ ಬೈಡನ್ ಆತಿಥ್ಯ ವಹಿಸುತ್ತಿದ್ದಾರೆ. 2021ರಲ್ಲಿ ಬೈಡನ್ ಆಡಳಿತವು ಮೊದಲ ಬಾರಿಗೆ ಕ್ವಾಡ್ ಶೃಂಗಸಭೆಗೆ ಶ್ವೇತ ಭವನದಲ್ಲಿ ಆತಿಥ್ಯ ವಹಿಸಿತ್ತು ಎಂದು ವಕ್ತಾರರು ಮಾಹಿತಿ ನೀಡಿದ್ದಾರೆ.
ಕ್ವಾಡ್ ಶೃಂಗಸಭೆಯಲ್ಲಿ ಹಿಂದೂ ಮಹಾಸಾಗರ-ಪೆಸಿಫಿಕ್ ಪ್ರದೇಶ, ಮಿಲಿಟರಿ, ಆರೋಗ್ಯ, ನೈಸರ್ಗಿಕ ವಿಕೋಪ, ಸಾಗರ ಭದ್ರತೆ, ಗುಣಮಟ್ಟದ ಮೂಲಸೌಕರ್ಯ, ತಂತ್ರಜ್ಞಾನ ಸೇರಿದಂತೆ ಹಲವು ವಿಷಯಗಳ ಕುರಿತು ಚರ್ಚಿಸುವ ಸಾಧ್ಯತೆಯಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.