ADVERTISEMENT

ವಲಸೆಗಾರರಿಗೆ ಕಾನೂನಿನ ಸ್ಥಾನಮಾನ: ಬೈಡನ್‌ ಆಡಳಿತದ ಅದ್ಯತೆ

ಮೊದಲ ದಿನದಂದೇ ಪೌರತ್ವ ನೀಡುವ ಕುರಿತು ಮಹತ್ವದ ನಿರ್ಧಾರ

ಏಜೆನ್ಸೀಸ್
Published 17 ಜನವರಿ 2021, 6:24 IST
Last Updated 17 ಜನವರಿ 2021, 6:24 IST
.
.   

ಸ್ಯಾನ್‌ ಡಿಯಾಗೊ: ಅಮೆರಿಕದಲ್ಲಿರುವ ಸುಮಾರು 1.1 ಕೋಟಿ ವಲಸಿಗರಿಗೆ ಕಾನೂನಿನ ಸ್ಥಾನಮಾನ ನೀಡಲು ಅಧ್ಯಕ್ಷರ ಹುದ್ದೆಗೆ ಆಯ್ಕೆಯಾಗಿರುವ ಜೋ ಬೈಡನ್‌ ಮುಂದಾಗಿದ್ದಾರೆ.

ಅಧಿಕಾರ ಸ್ವೀಕರಿಸಿದ ಬಳಿಕ ಇದೇ ವಿಷಯ ಪ್ರಥಮ ಆದ್ಯತೆಯಾಗಲಿದೆ. ವಲಸಿಗರಿಗೆ ಕಾನೂನಿನ ಸ್ಥಾನಮಾನ ನೀಡುವಂತೆ ಸಂಸತ್‌ ಸದಸ್ಯರನ್ನು ಸಹ ಕೋರಲಿದ್ದಾರೆ. ಬೈಡನ್‌ ಅವರ ಈ ನಿರ್ಧಾರ ವಕೀಲರ ಸಮುದಾಯದಲ್ಲೂ ಅಚ್ಚರಿ ಮೂಡಿಸಿದೆ.

ಮೊದಲ ದಿನದಂದೇ ಲಕ್ಷಾಂತರ ವಲಸಿಗರಿಗೆ ಪೌರತ್ವ ನೀಡುವ ಕುರಿತು ಮಹತ್ವದ ನಿರ್ಧಾರವನ್ನು ಬೈಡನ್‌ ಪ್ರಕಟಿಸುವ ಸಾಧ್ಯತೆ ಇದೆ ಎಂದು ಅವರ ಆಪ್ತರು ತಿಳಿಸಿದ್ದಾರೆ.

ADVERTISEMENT

‘ಅಧಿಕಾರ ಸ್ವೀಕರಿಸಿದ ಮೊದಲ ದಿನವೇ ವಲಸೆ ಮಸೂದೆಯನ್ನು ಸಂಸತ್‌ಗೆ ಕಳುಹಿಸುವ ಪ್ರಕ್ರಿಯೆಯನ್ನು ಹೊಸ ಅಧ್ಯಕ್ಷರು ಕೈಗೊಳ್ಳಲಿದ್ದಾರೆ’ ಎಂದು ಬೈಡನ್‌ ಅವರ ಸಿಬ್ಬಂದಿ ಮುಖ್ಯಸ್ಥ ರೊನ್‌ ಕ್ಲೈನ್‌ ತಿಳಿಸಿದ್ದಾರೆ.

ಬರಾಕ್‌ ಒಬಾಮ ಅವರು ಸಹ ಅಧ್ಯಕ್ಷರಾಗಿದ್ದಾಗ ವಲಸೆ ಮಸೂದೆ ಬಗ್ಗೆ ಹಲವು ಸಲ ಪ್ರಸ್ತಾಪಿಸಿದ್ದರು. ಆದರೆ, ಅವರ ಅಡಳಿತದಲ್ಲಿ ಈ ಮಸೂದೆ ಜಾರಿಯಾಗಲೇ ಇಲ್ಲ ಎಂದು ವಕೀಲರು ಹೇಳಿದ್ದಾರೆ.

‘ಟ್ರಂಪ್‌ ಅವರ ವಲಸೆ ವಿರೋಧಿ ಕಾರ್ಯಾಸೂಚಿಗೆ ವಿರುದ್ಧವಾಗಿ ಹೊಸ ನೀತಿ ಜಾರಿಯಾಗುವ ಸಾಧ್ಯತೆ ಇದೆ. ದಾಖಲೆಗಳು ಇಲ್ಲದೆಯೇ ಪ್ರಸ್ತುತ ಅಮೆರಿಕದಲ್ಲಿರುವವರಿಗೆ ಪೌರತ್ವ ನೀಡುವ ವಿಷಯ ಅತ್ಯಂತ ಮಹತ್ವದ್ದಾಗಿದೆ’ ಎಂದು ರಾಷ್ಟ್ರೀಯ ವಲಸೆ ಕಾನೂನು ಕೇಂದ್ರದ ಕಾರ್ಯಾನಿರ್ವಾಹಕ ನಿರ್ದೇಶಕರಾದ ಮರಲೆನಾ ಹಿಂಕಾಪಿ ವಿವರಿಸಿದ್ದಾರೆ.

ವಲಸಿಗರಿಗೆ ಸಂಬಂಧಿಸಿದ ಹೊಸ ಶಾಸನಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿ ಯಶಸ್ವಿಯಾದರೆ ಇದು ಅತ್ಯಂತ ಮಹತ್ವದ ಬೆಳವಣಿಗೆಯಾಗಲಿದೆ. 1986ರಲ್ಲಿ ಅಂದಿನ ಅಧ್ಯಕ್ಷರಾಗಿದ್ದ ರೊನಾಲ್ಡ್‌ ರೇಗನ್‌ ಅವರು ಅಕ್ರಮವಾಗಿ ವಾಸಿಸುತ್ತಿದ್ದ 30 ಲಕ್ಷ ಮಂದಿಗೆ ಕಾನೂನಿನ ಸ್ಥಾನಮಾನ ನೀಡಿದ್ದರು. ಬಳಿಕ ವಲಸೆ ನೀತಿಯನ್ನು ಸಮಗ್ರವಾಗಿ ಪರಿಷ್ಕರಿಸುವ ಪ್ರಯತ್ನಗಳನ್ನು 2007 ಮತ್ತು 2013ರಲ್ಲಿ ನಡೆದಿದ್ದವು. ಆದರೆ, ಈ ಪ್ರಯತ್ನಗಳೆಲ್ಲಾ ವಿಫಲವಾಗಿದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.