ವಾಷಿಂಗ್ಟನ್: ಉದ್ಯೋಗ ಆಧಾರಿತ ‘ಗ್ರೀನ್ ಕಾರ್ಡ್’ ಪಡೆಯುವಲ್ಲಿ ಪ್ರತಿ ದೇಶಗಳ ಮೇಲೆ ನಿಗದಿಪಡಿಸಿರುವ ಮಿತಿಯನ್ನು ತೆಗೆಯುವ ಕುರಿತ ಮಸೂದೆಯೊಂದು ಅಮೆರಿಕದ ಜನಪ್ರತಿನಿಧಿ ಸಭೆಯಲ್ಲಿ (ಹೌಸ್ ಆಫ್ ರೆಪ್ರೆಸೆಂಟೆಟಿವ್ಸ್) ಮಂಡನೆಯಾಗಿದೆ.
ಸಂಸದರಾದ ಜೋ ಲೋಫ್‌ಗ್ರೆನ್ ಮತ್ತು ಜಾನ್ ಕರ್ಟಿಸ್ ಅವರು ಈ ಮಸೂದೆ ಮಂಡಿಸಿದ್ದಾರೆ. ಇದು ಕಾಯ್ದೆಯಾಗಿ ಜಾರಿಯಾದಲ್ಲಿ ದಶಕಗಳಿಂದ ಗ್ರೀನ್ ಕಾರ್ಡ್ ನಿರೀಕ್ಷೆಯಲ್ಲಿರುವ ಭಾರತೀಯ ಐಟಿ ವೃತ್ತಿಪರರಿಗೆ ಪ್ರಯೋಜನವಾಗುತ್ತದೆ ಎಂದು ಹೇಳಲಾಗಿದೆ.
‘2021ರ ಕಾನೂನು ಬದ್ಧ ಉದ್ಯೋಗಕ್ಕಾಗಿ ಗ್ರೀನ್ ಕಾರ್ಡ್‌ಗಳಿಗೆ ಸಮಾನ ಪ್ರವೇಶ (ಇಎಜಿಎಲ್‌ಇ)‘ ಮಸೂದೆಯು ಸೆನೆಟ್‌ನಲ್ಲೂ (ಮೇಲ್ಮನೆ) ಅಂಗೀಕಾರವಾಗಬೇಕಿದೆ. ಬಳಿಕ ಅದು ಅಧ್ಯಕ್ಷರ ಸಹಿಗಾಗಿ ಶ್ವೇತಭವನಕ್ಕೆ ಹೋಗಬೇಕು.
ಉದ್ಯೋಗ ಆಧಾರಿತ ವಲಸಿಗರ ವೀಸಾಗಳ ಮೇಲಿನ ದೇಶದ ಶೇ 7ರ ಮಿತಿಯನ್ನು ರದ್ದುಪಡಿಸುವುದು ಹಾಗೂ ಕುಟುಂಬ ಪ್ರಾಯೋಜಿತ ವೀಸಾಗಳಿಗೆ ಸಂಬಂಧಿಸಿದಂತೆ ದೇಶಗಳ ಮೇಲಿನ ಮಿತಿಯನ್ನು ಶೇ 7ರಿಂದ 15ಕ್ಕೆ ಏರಿಸುವ ಪ್ರಸ್ತಾವ ಮಸೂದೆಯಲ್ಲಿದೆ.
ಈ ಮಸೂದೆಯು ಕಾಯ್ದೆಯಾದರೆ, ಪ್ರತಿ ದೇಶದ ಮಿತಿಗಳನ್ನು ತೆಗೆಯುವುದರ ಮೂಲಕ ನ್ಯಾಯಯುತವಾದ ಉದ್ಯೋಗ ಆಧಾರಿತ ವೀಸಾ ವ್ಯವಸ್ಥೆ ರಚನೆಯಾಗುತ್ತದೆ ಹಾಗೂ ಅರ್ಹತೆಯ ಮೇಲೆ ಕೇಂದ್ರೀಕರಿಸಿ ಮೊದಲು ಬಂದವರಿಗೆ, ಮೊದಲು ಸೇವೆ ಸಲ್ಲಿಸುವ ವ್ಯವಸ್ಥೆ ಜಾರಿಯಾಗುತ್ತದೆ. ಇದರಿಂದ ದೇಶದ ವ್ಯವಹಾರ ವಿಸ್ತರಣೆ ಸಾಧ್ಯವಾಗುತ್ತದೆ ಜತೆಗೆ ಜಾಗತಿಕ ಸ್ಪರ್ಧೆಯನ್ನು ಸಮರ್ಥವಾಗಿ ಎದುರಿಸಬಹುದಾಗಿದೆ ಎಂದು ಕರ್ಟಿಸ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.