ಕರಾಚಿ: ಕರಾಚಿ ವಿಶ್ವವಿದ್ಯಾಲಯದ ಆವರಣದಲ್ಲಿ ಮಂಗಳವಾರ ನಡೆದ ಆತ್ಮಹತ್ಯಾ ಬಾಂಬ್ ದಾಳಿ ಕೃತ್ಯದಲ್ಲಿ ಮೂವರು ಚೀನಾ ಪ್ರಜೆಗಳು ಸೇರಿದಂತೆ ನಾಲ್ವರು ಮೃತಪಟ್ಟಿದ್ದು, ಇತರೆ ಇಬ್ಬರು ಗಾಯಗೊಂಡಿದ್ದಾರೆ.
ವಿಶ್ವವಿದ್ಯಾಲಯ ಆವರಣದ ಕನ್‌ಫ್ಯೂಷಿಯಸ್ ಇನ್‌ಸ್ಟಿಟ್ಯೂಟ್ ಬಳಿ ಕೃತ್ಯ ನಡೆದಿದೆ. ವಾಹನವು ವಿ.ವಿ.ಯ ಆವರಣವನ್ನು ಪ್ರವೇಶಿಸುವ ಹಂತದಲ್ಲಿ ಬುರ್ಕಾ ಧರಿಸಿದ್ದ ಮಹಿಳೆಯೊಬ್ಬರು ಸ್ಫೋಟಿಸಿಕೊಂಡು ಕೃತ್ಯ ಎಸಗಿದ್ದಾರೆ.
ಮೃತರಲ್ಲಿ ಇಬ್ಬರು ಮಹಿಳೆಯರು. ಮೃತರನ್ನು ಕನ್‌ಫ್ಯೂಷಿಯಸ್ ಇನ್‌ಸ್ಟಿಟ್ಯೂಟ್‌ನ ನಿರ್ದೇಶಕ ಹುಹಾಂಗ್ ಗ್ಯುಪಿಂಗ್, ಡಿಂಗ್ ಮುಪೆಂಗ್, ಚೆನ್ ಸಾ ಮತ್ತು ವಾಹನ ಚಾಲಕ ಖಾಲಿದ್ ಎಂದು ಗುರುತಿಸಲಾಗಿದೆ.
ಆತ್ಮಹತ್ಯಾ ದಾಳಿ ಕೃತ್ಯದ ಹೊಣೆಯನ್ನು ನಿಷೇಧಿತ ಬಲೂಚ್ ಲಿಬರೇಷನ್ ಆರ್ಮಿ ಸಂಘಟನೆ ಹೊತ್ತುಕೊಂಡಿದೆ. ‘ಸಂಘಟನೆಯ ಮಹಿಳಾ ಸದಸ್ಯೆಯು ಕಾರ್ಯಗತಗೊಳಿಸಿದ ಮೊದಲ ಆತ್ಮಾಹುತಿ ದಾಳಿ ಇದಾಗಿದೆ. ಸಂಘಟನೆಯ ಸದಸ್ಯೆ ‘ಶಾರಿ ಬಲೂಚ್ ಅಲಿಯಾಸ್ ಬ್ರಂಶ್’ ಈ ಕೃತ್ಯ ನಡೆಸಿದ್ದಾರೆ’ ಎಂದು ಸಂಘಟನೆಯು ಹೇಳಿಕೊಂಡಿದೆ.
ಚೀನಿ ಭಾಷೆ ಬೋಧಕರಿದ್ದ ವಾಹನಕ್ಕೆ ಭದ್ರತೆ ಒದಗಿಸಲಾಗಿತ್ತು. ವ್ಯಾನ್ ಹಿಂದೆ ಬೈಕ್‌ನಲ್ಲಿ ಬರುತ್ತಿದ್ದ ನಾಲ್ವರು ರೇಂಜರ್ ಗಳೂ ಗಾಯಗೊಂಡಿದ್ದಾರೆ ಎಂದು ಭಯೋತ್ಪಾದನೆ ನಿಗ್ರಹ ದಳದ ಅಧಿಕಾರಿ ರಾಜಾ ಉಮರ್ ಖತಾಬ್ ಹೇಳಿದರು.
ಸ್ಫೋಟದ ಹಿಂದೆಯೇ ವಾಹನಕ್ಕೆ ಬೆಂಕಿ ಹೊತ್ತಿಕೊಂಡಿದ್ದು, ಈ ಸಂಬಂಧಿತ ವಿಡಿಯೊಗಳು ಜಾಲತಾಣದಲ್ಲಿ ವೈರಲ್ ಆದವು. ಭದ್ರತಾ ಸಿಬ್ಬಂದಿಯು ಕೂಡಲೇ ಆವರಣವನ್ನು ಸುತ್ತುವರಿದಿದ್ದಾರೆ.
ಪೊಲೀಸರ ಪ್ರಕಾರ, ವಾಹನದಲ್ಲಿ 7–8 ಜನರಿದ್ದರು. ಚೀನಾ–ಪಾಕಿಸ್ತಾನ ಆರ್ಥಿಕ ಕಾರಿಡಾರ್ ಯೋಜನೆಯ ಭಾಗವಾಗಿ ಪಾಕಿಸ್ತಾನದ ವಿವಿಧೆಡೆ ಚೀನಾದ ಪ್ರಜೆಗಳು ದೊಡ್ಡ ಸಂಖ್ಯೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ಹಿಂದೆಯೂ ಚೀನಿ ಪ್ರಜೆಗಳನ್ನು ಗುರಿಯಾಗಿಸಿ ಸ್ಫೋಟ ಕೃತ್ಯಗಳು ನಡೆದಿವೆ. ಕಳೆದ ವರ್ಷ ಜುಲೈನಲ್ಲಿ ಮುಸುಕುಧಾರಿ ವ್ಯಕ್ತಿ ಚೀನಿ ಪ್ರಜೆಗಳ ಮೇಲೆ ಗುಂಡು ಹಾರಿಸಿದ್ದ. ಅದೇ ತಿಂಗಳು ಬಸ್‌ನಲ್ಲಿ ಸ್ಫೋಟ ಸಂಭವಿಸಿ 12 ಮಂದಿ ಮೃತಪಟ್ಟಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.