ADVERTISEMENT

ಕದನ ವಿರಾಮಕ್ಕೆ ಇಸ್ರೇಲ್ ನಕಾರ, ಬ್ಲಿಂಕೆನ್ ಮಧ್ಯಪ್ರಾಚ್ಯ ಭೇಟಿ ಅಂತ್ಯ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2024, 15:22 IST
Last Updated 8 ಫೆಬ್ರುವರಿ 2024, 15:22 IST
<div class="paragraphs"><p>ಗಾಜಾ ಪಟ್ಟಿಯಲ್ಲಿ ಇಸ್ರೇಲ್ ಯೋಧ</p></div>

ಗಾಜಾ ಪಟ್ಟಿಯಲ್ಲಿ ಇಸ್ರೇಲ್ ಯೋಧ

   

– ರಾಯಿಟರ್ಸ್ ಚಿತ್ರ

ಟೆಲ್ ಅವಿವ್: ಇಸ್ರೇಲ್–ಹಮಾಸ್ ನಡುವಿನ ಯುದ್ಧದ ವಿಚಾರವಾಗಿ ಅಮೆರಿಕ ಮತ್ತು ಇಸ್ರೇಲ್ ನಡುವಿನ ಭಿನ್ನಾಭಿಪ್ರಾಯವು ತೀವ್ರಗೊಂಡಿದೆ. ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕೆನ್ ಅವರು ಮಧ್ಯಪ್ರಾಚ್ಯ ಭೇಟಿಯನ್ನು ಗುರುವಾರ ಕೊನೆಗೊಳಿಸಿದ್ದಾರೆ. 

ADVERTISEMENT

ಇಸ್ರೇಲ್–ಹಮಾಸ್ ಸಮರ ಆರಂಭವಾದ ನಂತರದಲ್ಲಿ ಬ್ಲಿಂಕೆನ್ ಇದುವರೆಗೆ ಐದು ಬಾರಿ ಮಧ್ಯಪ್ರಾಚ್ಯಕ್ಕೆ ಭೇಟಿ ನೀಡಿದ್ದಾರೆ. ಇಸ್ರೇಲ್ ಸಂಪೂರ್ಣವಾಗಿ ಜಯ ಸಾಧಿಸುವವರೆಗೂ ಹಮಾಸ್ ಜೊತೆಗಿನ ಯುದ್ಧ ಮುಂದುವರಿಯಲಿದೆ ಎಂದು ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಹೇಳಿದ್ದಾರೆ. ಇದು ಬ್ಲಿಂಕೆನ್ ಅವರ ಯತ್ನಗಳಿಗೆ ಆಗಿರುವ ಹಿನ್ನಡೆ ಎನ್ನಲಾಗಿದೆ.

ಇಸ್ರೇಲ್ ಮತ್ತು ಅಮೆರಿಕ ನಡುವಿನ ಸಂಬಂಧವು ಕೆಲವು ತಿಂಗಳುಗಳಿಂದ ಬಿಗುವಿನಿಂದ ಕೂಡಿದೆ. ಕದನವಿರಾಮದ ಪ್ರಸ್ತಾವದಲ್ಲಿ ಒಂದಿಷ್ಟು ಒಳಿತು ಇದೆ ಎಂದು ಅಮೆರಿಕ ಹೇಳಿತ್ತು. ಆದರೆ ಇದನ್ನು ನೆತನ್ಯಾಹು ಅವರು ಸಾರಾಸಗಟಾಗಿ ತಳ್ಳಿಹಾಕಿರುವುದು ಎರಡೂ ದೇಶಗಳ ನಡುವಿನ ಭಿನ್ನಾಭಿಪ್ರಾಯವನ್ನು ಎತ್ತಿತೋರಿಸಿದೆ.

ಪ್ಯಾಲೆಸ್ಟೀನ್ ನಾಗರಿಕರ ಪರಿಸ್ಥಿತಿಯನ್ನು ಸುಧಾರಿಸುವ ನಿಟ್ಟಿನಲ್ಲಿ, ಸಂಘರ್ಷವು ಇನ್ನಷ್ಟು ವಿಸ್ತರಿಸದಂತೆ ನೋಡಿಕೊಳ್ಳುವಲ್ಲಿ ಹಾಗೂ ಹಮಾಸ್ ವಶದಲ್ಲಿ ಇರುವ ಒತ್ತೆಯಾಳುಗಳ ಬಿಡುಗಡೆ ವಿಚಾರದಲ್ಲಿ ಪ್ರಗತಿ ಸಾಧಿಸಬಹುದು ಎಂಬ ಆಶಾವಾದ ತಮಗೆ ಇದೆ ಎಂದು ಬ್ಲಿಂಕೆನ್ ಮತ್ತು ಅಮೆರಿಕದ ಅಧಿಕಾರಿಗಳು ಹೇಳಿದ್ದಾರೆ. 

ಹಮಾಸ್ ಕಡೆಯಿಂದ ಬಂದಿರುವ ಪ್ರತಿಕ್ರಿಯೆಯಲ್ಲಿ ಒಪ್ಪಂದವೊಂದಕ್ಕೆ ಬರಲು ಅಗತ್ಯವಿರುವ ಅಂಶಗಳು ಇವೆ ಎಂದು ಬ್ಲಿಂಕೆನ್ ಅವರು ಹೇಳಿದ್ದಾರೆ. ಆದರೆ ಬ್ಲಿಂಕೆನ್ ಮಾತಿಗೂ ತುಸು ಮೊದಲು ನೆತನ್ಯಾಹು ಅವರು ಹಮಾಸ್‌ ಪ್ರತಿಕ್ರಿಯೆಯ ಬಗ್ಗೆ ಉಲ್ಲೇಖಿಸಿ, ‘ಅದೊಂದು ಭ್ರಾಂತಿಯಷ್ಟೇ... ಏನೇ ಆಗಲಿ, ಪರಿಪೂರ್ಣ ವಿಜಯ ಸಾಧಿಸುವರೆಗೆ ಇಸ್ರೇಲ್ ಹೋರಾಟ ನಡೆಸಲಿದೆ’ ಎಂದು ಹೇಳಿದ್ದರು.

ಪ್ಯಾಲೆಸ್ಟೀನ್ ನಿರಾಶ್ರಿತರಿಗಾಗಿ ಕೆಲಸ ಮಾಡುತ್ತಿರುವ ಯುಎನ್‌ಆರ್‌ಡಬ್ಲ್ಯುಎ ಸಂಸ್ಥೆಯನ್ನು ವಿಸರ್ಜಿಸಬೇಕು ಎಂದು ನೆತನ್ಯಾಹು ಹೇಳಿದ್ದಾರೆ. ಸಂಸ್ಥೆಯು ಇಸ್ರೇಲ್ ವಿರೋಧಿಯಾಗಿದೆ, ಸಂಸ್ಥೆಯ ನೌಕರರು ಇಸ್ರೇಲ್ ಮೇಲೆ ಹಮಾಸ್ ನಡೆಸಿದ ದಾಳಿಯಲ್ಲಿ ಭಾಗಿಯಾಗಿದ್ದರು ಎಂಬ ಆರೋಪ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.