ಕೈರೊ(ಈಜಿಪ್ಟ್): ಗಾಜಾ ಪಟ್ಟಿಯ ದಕ್ಷಿಣಕ್ಕಿರುವ ರಫಾ ನಗರ ಮೇಲೆ ಇಸ್ರೇಲ್ ಸೇನೆ ನಡೆಸಿದ ದಾಳಿ ಒಂದು ‘ಪ್ರಮಾದ‘ವಾಗಿದೆ. ಹಮಾಸ್ ಬಂಡುಕೋರರು ಈಗಾಗಲೇ ತೀವ್ರ ಹಿನ್ನಡೆ ಅನುಭವಿಸುತ್ತಿದ್ದು, ಅವರನ್ನು ಮಟ್ಟ ಹಾಕುವುದಕ್ಕಾಗಿ ಇಂತಹ ದಾಳಿಯ ಅಗತ್ಯ ಇರಲಿಲ್ಲ ಎಂದು ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಆ್ಯಂಟೊನಿ ಬ್ಲಿಂಕೆನ್ ಹೇಳಿದ್ದಾರೆ.
‘ಇಸ್ರೇಲ್ ಸೇನೆಯ ಇಂತಹ ನಡೆಯಿಂದ ಅಮೆರಿಕ ಮತ್ತು ಇಸ್ರೇಲ್ ನಡುವಿನ ಸಂಬಂಧಕ್ಕೆ ಮತ್ತಷ್ಟು ಧಕ್ಕೆಯಾಗಲಿದೆ’ ಎಂದು ಪ್ರತಿಪಾದಿಸಿದ್ದಾರೆ.
ಈಜಿಪ್ಟ್ ರಾಜಧಾನಿ ಕೈರೊಗೆ ಭೇಟಿ ನೀಡಿರುವ ಬ್ಲಿಂಕೆನ್, ಅರಬ್ ದೇಶಗಳ ಉನ್ನತ ರಾಜತಾಂತ್ರಿಕರೊಂದಿಗೆ ಮಾತುಕತೆ ನಡೆಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದರು.
ಇಸ್ರೇಲ್ ಮತ್ತು ಹಮಾಸ್ ಬಂಡುಕೋರರ ನಡುವಿನ ಕದನಕ್ಕೆ ವಿರಾಮ ಕಂಡುಕೊಳ್ಳುವುದು ಹಾಗೂ ಯುದ್ಧದ ನಂತರ ಗಾಜಾದ ಭವಿಷ್ಯ ಕುರಿತು ಚರ್ಚಿಸಲು ಬ್ಲಿಂಕೆನ್ ಅವರು ಇಲ್ಲಿಗೆ ತುರ್ತು ಭೇಟಿ ನೀಡಿದ್ದಾರೆ. ಉಭಯ ದೇಶಗಳ ನಡುವೆ ಯುದ್ಧ ಆರಂಭಗೊಂಡ ನಂತರ ಬ್ಲಿಂಕೆನ್ ಮಧ್ಯಪ್ರಾಚ್ಯಕ್ಕೆ ನೀಡುತ್ತಿರುವ ಆರನೇ ಭೇಟಿ ಇದಾಗಿದೆ.
‘ತಕ್ಷಣವೇ ಕದನ ವಿರಾಮ ಘೋಷಿಸಬೇಕು. ತಾನು ಒತ್ತೆಯಾಳಾಗಿರಿಸಿಕೊಂಡಿರುವ ಇಸ್ರೇಲ್ ಪ್ರಜೆಗಳನ್ನು ಹಮಾಸ್ ಕೂಡಲೇ ಬಿಡುಗಡೆ ಮಾಡುವುದು ಈಗಿನ ತುರ್ತು’ ಎಂದು ಹೇಳಿದ್ದಾರೆ.
ಬ್ಲಿಂಕೆನ್ ಅವರು ಶುಕ್ರವಾರ ಇಸ್ರೇಲ್‌ಗೆ ಭೇಟಿ ನೀಡಿದ್ದು, ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರೊಂದಿಗೆ ಚರ್ಚಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.