ಢಾಕಾ: ಬಾಂಗ್ಲಾದೇಶದ ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಬದಲಾವಣೆ ಪರ್ವ ಆರಂಭಗೊಂಡಿದೆ. ಈ ಸಂದರ್ಭದಲ್ಲಿ ಶಾಂತಿ ಮತ್ತು ಸಂಯಮ ಕಾಪಾಡಿಕೊಳ್ಳುವಂತೆ ದೇಶದ ಜನರಿಗೆ ಕರೆ ನೀಡುತ್ತೇನೆ ಎಂದು ಬಾಂಗ್ಲಾದೇಶ್ ನ್ಯಾಷನಲಿಸ್ಟ್ ಪಾರ್ಟಿಯ (ಬಿಎನ್‌ಪಿ) ಮುಖ್ಯಸ್ಥ ತಾರಿಕ್ ರೆಹಮಾನ್ ತಿಳಿಸಿದ್ದಾರೆ.
ಬಾಂಗ್ಲಾದೇಶದಲ್ಲಿ ಭಾರಿ ಹಿಂಸಾಚಾರ ನಡೆದ ಬೆನ್ನಲ್ಲೇ ಪ್ರಧಾನಿ ಶೇಖ್ ಹಸೀನಾ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿ, ದೇಶ ತೊರೆದಿದ್ದಾರೆ. ಈ ಮೂಲಕ ಅವರ ಸತತ 15 ವರ್ಷಗಳ ಸುದೀರ್ಘ ಆಡಳಿತ ಅಂತ್ಯವಾಗಿದೆ. ಅದಾದ ಬಳಿಕ, ದೇಶದ ಸೇನೆ ‘ಮಧ್ಯಂತರ ಸರ್ಕಾರ’ ರಚಿಸುವುದಾಗಿ ಘೋಷಿಸಿದೆ.
ಈ ಕುರಿತು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ತಾರಿಕ್ ರೆಹಮಾನ್, ‘ಧರ್ಮ ಮತ್ತು ರಾಜಕೀಯವನ್ನು ಲೆಕ್ಕಿಸದೆ ಎಲ್ಲಾ ಬಾಂಗ್ಲಾದೇಶೀಯರನ್ನು ಹಿಂಸಾಚಾರದಿಂದ ರಕ್ಷಿಸುವುದು ಮತ್ತು ಯಾವುದೇ ನಿರ್ದಿಷ್ಟ ಸಮುದಾಯಕ್ಕೆ ಕಿರುಕುಳ ನೀಡುವುದು, ವಿಭಜನೆ ಮಾಡುವುದು ಅಥವಾ ಸೇಡು ತೀರಿಸಿಕೊಳ್ಳುವುದು ನಮ್ಮ ಕರ್ತವ್ಯವಲ್ಲ. ಮುಸ್ಲಿಮರು, ಹಿಂದೂಗಳು, ಕ್ರೈಸ್ತರು, ಬೌದ್ಧರು, ಆಸ್ತಿಕರು, ನಾಸ್ತಿಕರು ಯಾರೇ ಇರಲಿ.. ಯಾರೊಬ್ಬರನ್ನೂ ಹೊರಗಿಡುವ ಪ್ರಶ್ನೆಯೇ ಇಲ್ಲ ಅಥವಾ ಪೂರ್ವಗ್ರಹ ಪೀಡಿತರಾಗಿ ನಮ್ಮ ಪ್ರಜಾಸತ್ತಾತ್ಮಕ ಹಾದಿಯನ್ನು ತೊರೆಯುವುದಿಲ್ಲ. ಎಲ್ಲರನ್ನೂ ಒಳಗೊಂಡ ನಾವು ಹೆಮ್ಮೆಯ ಬಾಂಗ್ಲಾದೇಶಿಯರು’ ಎಂದು ಹೇಳಿದ್ದಾರೆ.
‘ದೇಶದ ಜನರು ಕಳೆದ 16 ವರ್ಷಗಳಿಂದ ದಬ್ಬಾಳಿಕೆ ಮತ್ತು ಅನ್ಯಾಯಕ್ಕೆ ಒಳಗಾಗಿದ್ದಾರೆ. ಅನ್ಯಾಯ ಮಾಡಿದವರ ವಿರುದ್ಧ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ. ಜನರೇ ಕಾನೂನನ್ನು ಕೈಗೆತ್ತಿಕೊಂಡರೆ ಅದು ಶೇಖ್ ಹಸೀನಾ ಅವರ ಕಾನೂನುಬಾಹಿರ ಮತ್ತು ನಿರಂಕುಶ ಆಡಳಿತವನ್ನು ಉರುಳಿಸಿದ ಕ್ರಾಂತಿಯ ಮನೋಭಾವವನ್ನು ಸೋಲಿಸಿದಂತಾಗುತ್ತದೆ’ ಎಂದು ತಿಳಿಸಿದ್ದಾರೆ.
‘ದೇಶದ ಎಲ್ಲಾ ರಾಜಕೀಯ ಪಕ್ಷಗಳು ಎಚ್ಚರಿಕೆಯಿಂದ ಇರಬೇಕು. ಸಾರ್ವಜನಿಕ ಮತ್ತು ಖಾಸಗಿ ಸಂಸ್ಥೆಗಳು ಸೇರಿದಂತೆ ಮೂಲಸೌಕರ್ಯಗಳನ್ನು ರಕ್ಷಿಸಬೇಕು. ನಾಗರಿಕರು ಮತ್ತು ನೆರೆಹೊರೆಯವರ ಬಗ್ಗೆ ಕಾಳಜಿ ವಹಿಸುವಂತೆ ನಾನು ವಿನಂತಿಸುತ್ತೇನೆ’ ಎಂದಿದ್ದಾರೆ.
ಎಲ್ಲರಿಗೂ ನ್ಯಾಯ, ಸಮಾನತೆ ಮತ್ತು ಪ್ರಜಾಸತ್ತಾತ್ಮಕ ತತ್ವಗಳನ್ನು ಖಾತ್ರಿಪಡಿಸುವ ಸಂದೇಶವನ್ನು ರವಾನಿಸೋಣ ಎಂದು ಬರೆದುಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.