ADVERTISEMENT

Bangladesh | ಹಸೀನಾ ಗಡಿಪಾರಿಗೆ ಮನವಿ

ಪಿಟಿಐ
Published 20 ಆಗಸ್ಟ್ 2024, 14:00 IST
Last Updated 20 ಆಗಸ್ಟ್ 2024, 14:00 IST
ಶೇಖ್‌ ಹಸೀನಾ
ಶೇಖ್‌ ಹಸೀನಾ   

ಢಾಕಾ: ಪದಚ್ಯುತ ಪ್ರಧಾನಿ ಶೇಖ್‌ ಹಸೀನಾ ಅವರನ್ನು ಗಡಿಪಾರು ಮಾಡುವಂತೆ ಬಾಂಗ್ಲಾದೇಶ ನ್ಯಾಷನಲಿಸ್ಟ್‌ ಪಕ್ಷದ ಪ್ರಧಾನ ಕಾರ್ಯದರ್ಶಿ ಮಿರ್ಜಾ ಫಖ್ರುಲ್‌ ಇಸ್ಲಾಂ ಅಲಾಂಗಿರ್‌ ಅವರು ಭಾರತಕ್ಕೆ ಮನವಿ ಮಾಡಿದ್ದಾರೆ.

ದೇಶದ ಕ್ರಾಂತಿಯನ್ನು ನಿಷ್ಫಲ ಗೊಳಿಸಲು ಶೇಖ್‌ ಹಸೀನಾ ಅವರು ಸಂಚು ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

‘ಕಾನೂನಾತ್ಮಕ ಮಾರ್ಗದ ಮೂಲಕ ಹಸೀನಾ ಅವರನ್ನು ಬಾಂಗ್ಲಾ ಸರ್ಕಾರಕ್ಕೆ ಹಸ್ತಾಂತರಿಸಿ. ಅವರು ವಿಚಾರಣೆ ಎದುರಿಸಲಿ’ ಎಂದು ಫಖ್ರುಲ್‌ ಹೇಳಿರುವುದಾಗಿ ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.

ADVERTISEMENT

ಮತ್ತೊಂದು ಕೊಲೆ ಪ್ರಕರಣ ದಾಖಲು:

2013ರ ಮೇ ತಿಂಗಳಲ್ಲಿ ಇಸ್ಲಾಮಿಸ್ಟ್ ಗುಂಪುಗಳು ನಡೆಸಿದ ರ‍್ಯಾಲಿಯನ್ನು ಹತ್ತಿಕ್ಕಿ ನರಮೇಧ ನಡೆಸಿದ ಆರೋಪದ ಮೇಲೆ ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಕ್ ಹಸೀನಾ ಹಾಗೂ 23 ಮಂದಿಯ ವಿರುದ್ಧ ಮಂಗಳವಾರ ಬಾಂಗ್ಲಾದೇಶ ಅಂತರರಾಷ್ಟ್ರೀಯ ಅಪರಾಧಗಳ ನ್ಯಾಯಮಂಡಳಿ ಯಲ್ಲಿ ಮತ್ತೊಂದು ದೂರು ದಾಖಲಾಗಿದೆ.

‘ಹೆಫಾಜತ್‌–ಎ–ಇಸ್ಲಾಂ (ಶಿಕ್ಷಣ–ಕಾನೂನು) ವಿಭಾಗದ ಜಂಟಿ ಕಾರ್ಯದರ್ಶಿ ಮುಫ್ತಿ ಹರೂನ್‌ ಇಜಾಹರ್‌ ಪರವಾಗಿ ಸುಪ್ರೀಂ ಕೋರ್ಟ್‌ ವಕೀಲ ಘಾಜಿ ಎಂಎಚ್‌ ತಮೀಮ್‌ ಅವರು ದೂರು ದಾಖಲಿಸಿದ್ದಾರೆ’ ಎಂದು ‘ದಿ ಡೈಲಿ ಸ್ಟಾರ್‌’ ಪತ್ರಿಕೆ ವರದಿ ಮಾಡಿದೆ. 

‘ನಾವು ದೂರು ಸ್ವೀಕರಿಸಿದ್ದು, ಮಂಗಳವಾರದಿಂದಲೇ ತನಿಖೆ ಆರಂಭಗೊಂಡಿದೆ ಎಂದು ತನಿಖಾ ತಂಡ (ಆಡಳಿತ) ವಿಭಾಗದ ಉಪ ನಿರ್ದೇಶಕ ಅತೌರ್‌ ರಹಮಾನ್‌ ತಿಳಿಸಿದ್ದಾರೆ’ ಎಂದು ಪತ್ರಿಕೆಯು ಉಲ್ಲೇಖಿಸಿದೆ.

‘ಪ್ರಾಥಮಿಕ ಹಂತದ ತನಿಖೆ ಮುಕ್ತಾಯಗೊಂಡ ಬಳಿಕ, ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಲಾಗುವುದು. ನ್ಯಾಯಮಂಡಳಿಯನ್ನು ಪುನರ್‌ರಚಿಸಿ, ಆರೋಪಿಗಳ ವಿರುದ್ಧ ಆರೆಸ್ಟ್‌ ವಾರಂಟ್‌ ಹೊರಡಿಸಲಾಗುವುದು’ ಎಂದು ಅವರು ತಿಳಿಸಿದರು.

2013ರ ಮೇ 5ರಂದು ಮೊತಿಜಹೀಲ್‌ ಶಾ‍ಪ್ಲಾ ಛತ್ತರ್‌ನಲ್ಲಿ ನಡೆದ ಹೆಫಾಜತ್‌–ಎ–ಇಸ್ಲಾಂ ರ‍್ಯಾಲಿ
ಯನ್ನು ಹತ್ತಿಕ್ಕಿ ಸಾಮೂಹಿಕ ನರಮೇಧ ನಡೆಸಿದ ಆರೋಪವನ್ನು ಹಸೀನಾ ಹಾಗೂ 23 ಮಂದಿ ವಿರುದ್ಧ ಹೊರಿಸಲಾಗಿದೆ.

17 ವರ್ಷದ ಬಳಿಕ ಖಲೀದಾ ಜಿಯಾ ಬ್ಯಾಂಕ್‌ ಖಾತೆ ಸಕ್ರಿಯ:

ಬಾಂಗ್ಲಾದೇಶದ ಮಾಜಿ ಪ್ರಧಾನಿ ಖಲೀದಾ ಜಿಯಾ ಅವರ ಬ್ಯಾಂಕ್‌ ಖಾತೆಗಳನ್ನು ತೆರಿಗೆ ಇಲಾಖೆ ಅಧಿಕಾರಿಗಳು 17 ವರ್ಷಗಳ ಬಳಿಕ ಸಕ್ರಿಯಗೊಳಿಸಿದ್ದಾರೆ.

ರಾಷ್ಟ್ರೀಯ ಆದಾಯ ಮಂಡಳಿಯು (ಎನ್‌ಬಿಆರ್) ಈ ಬಗ್ಗೆ ಬ್ಯಾಂಕ್‌ನ ಅಧಿಕಾರಿಗಳಿಗೆ ಸೂಚನೆಯನ್ನು ನೀಡಿದೆ ಎಂದು ‘ಡೈಲಿ ಸ್ಟಾರ್’ ದೈನಿಕವು ವರದಿ ಮಾಡಿದೆ.

ಮಾಜಿ ಪ್ರಧಾನಿಯೂ ಆದ ಖಲೀದಾ ಜಿಯಾ ಅವರ ಬ್ಯಾಂಕ್‌ ಖಾತೆ ಸ್ಥಗಿತಗೊಳಿಸಲು ಎನ್‌ಬಿಆರ್‌ನ ಕೇಂದ್ರ ಕಣ್ಗಾವಲು ಘಟಕ 2007ರ ಆಗಸ್ಟ್‌ನಲ್ಲಿ ಬ್ಯಾಂಕ್‌ಗಳಿಗೆ ಸೂಚಿಸಿತ್ತು.

ಮೃತರ ಕುಟುಂಬಗಳ ನೆರವಿಗೆ ಪ್ರತಿಷ್ಠಾನ

ವಿದ್ಯಾರ್ಥಿ ಸಂಘಟನೆಗಳು ಪ್ರತಿಭಟನೆ ನಡೆಸಿದ ಸಂದರ್ಭ ಉಂಟಾದ ಹಿಂಸಾಚಾರದಲ್ಲಿ ಮೃತಪಟ್ಟವರ ಕುಟುಂಬದ ಸದಸ್ಯರ ಯೋಗಕ್ಷೇಮ ನೋಡಿಕೊಳ್ಳಲು ಪ್ರತಿಷ್ಠಾನವೊಂದನ್ನು ಸ್ಥಾಪಿಸಲು ಬಾಂಗ್ಲಾದೇಶದ ಸರ್ಕಾರ ತೀರ್ಮಾನಿಸಿದೆ.

ಮುಖ್ಯ ಸಲಹೆಗಾರ ಪ್ರೊಫೆಸರ್ ಮೊಹಮ್ಮದ್ ಯೂನಸ್ ಅವರು ಪ್ರತಿಷ್ಠಾನದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುವರು. ಮಧ್ಯಂತರ ಸರ್ಕಾರದ ಸಲಹೆಗಾರರು, ವಿದ್ಯಾರ್ಥಿ ಸಂಘಟನೆಗಳ ಪ್ರತಿನಿಧಿಗಳು, ದುರ್ಘಟನೆಯಲ್ಲಿ ಮೃತಪಟ್ಟ ಕುಟುಂಬಗಳ ಸದಸ್ಯರು ಈ ಪ್ರತಿಷ್ಠಾನದಲ್ಲಿ ಇರುತ್ತಾರೆ ಎಂದು ಯೂನಸ್ ಅವರ ಕಚೇರಿಯ ಪ್ರಕಟಣೆ ಮಂಗಳವಾರ ತಿಳಿಸಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.