ಬ್ಯಾಂಕಾಕ್: ಮ್ಯಾನ್ಮಾರ್‌ನಿಂದ ಮಲೇಷ್ಯಾಕ್ಕೆ ರೋಹಿಂಗ್ಯಾ ವಲಸಿಗರನ್ನು ಹೊತ್ತು ತೆರಳುತ್ತಿದ್ದ ದೋಣಿಯೊಂದು ಬಂಗಾಳ ಕೊಲ್ಲಿಯಲ್ಲಿ ಮಗುಚಿದ್ದು, ಕನಿಷ್ಠ 17 ಮಂದಿ ಮೃತಪಟ್ಟಿದ್ದಾರೆ. 30 ಮಂದಿ ಕಾಣೆಯಾಗಿದ್ದಾರೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
ಮ್ಯಾನ್ಮಾರ್‌ನ ಬುತಿದುವಾಂಗ್‌ನಿಂದ ಕಳೆದ ವಾರ ಹೊರಟಿದ್ದ ದೋಣಿಯಲ್ಲಿ 55 ಜನರಿದ್ದರು ಎಂದು ಗೊತ್ತಾಗಿದೆ. ಸಿಟ್ವೆ ಎಂಬಲ್ಲಿ ಈ ದುರಂತ ಸಂಭವಿಸಿದ್ದು, ಸೋಮವಾರದಿಂದ ಬುಧವಾರದ ನಡುವಿನ ಅವಧಿಯಲ್ಲಿ ಕಡಲ ತೀರಕ್ಕೆ 10 ಮಹಿಳೆಯರೂ ಸೇರಿದಂತೆ 17 ಜನರ ಮೃತದೇಹಗಳು ಬಂದು ಬಿದ್ದಿವೆ.
ದೋಣಿಯಲ್ಲಿದ್ದ ಎಂಟು ಮಂದಿ ಮಾತ್ರ ಬದುಕುಳಿದಿದ್ದು, ಅವರನ್ನು ಮ್ಯಾನ್ಮಾರ್‌ನ ಭದ್ರತಾ ಪಡೆಗಳು ಕರೆದೊಯ್ದಿವೆ ಎಂದು ಅಧಿಕಾರಿಗಳು ಹೇಳಿದರು.
ದೋಣಿ ದುರಂತ ಯಾವಾಗ, ಹೇಗೆ ಸಂಭವಿಸಿತು ಎಂಬುದು ಈ ವರೆಗೆ ಗೊತ್ತಾಗಿಲ್ಲ. ರಕ್ಷಣಾ ಕಾರ್ಯಾಚರಣೆ ಇನ್ನೂ ಮುಂದುವರಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.