ADVERTISEMENT

ವಿಮಾನ ಪತನ: ತನಿಖೆಗೆ ಸಹಾಯ ಮಾಡಲು ಸಿದ್ಧ ಎಂದ ಬೋಯಿಂಗ್ ಚೀನಾ

ಐಎಎನ್ಎಸ್
Published 22 ಮಾರ್ಚ್ 2022, 5:01 IST
Last Updated 22 ಮಾರ್ಚ್ 2022, 5:01 IST
ವಿಮಾನ ಬಿದ್ದ ಸ್ಥಳದಲ್ಲಿ ಭಾರಿ ಬೆಂಕಿ ಮತ್ತು ಹೊಗೆ ಕಾಣಿಸಿಕೊಂಡ ದೃಶ್ಯ (ಚಿತ್ರ: Twitter/@PrateekPratap5)
ವಿಮಾನ ಬಿದ್ದ ಸ್ಥಳದಲ್ಲಿ ಭಾರಿ ಬೆಂಕಿ ಮತ್ತು ಹೊಗೆ ಕಾಣಿಸಿಕೊಂಡ ದೃಶ್ಯ (ಚಿತ್ರ: Twitter/@PrateekPratap5)   

ಬೀಜಿಂಗ್:132 ಮಂದಿಯಿದ್ದ ಬೋಯಿಂಗ್‌ 737 ಪ್ರಯಾಣಿಕ ವಿಮಾನವು ಸೋಮವಾರ ದಕ್ಷಿಣ ಚೀನಾದ ಪರ್ವತ ಪ್ರದೇಶದಲ್ಲಿ ಪತನಗೊಂಡಿದೆ. ಹೀಗಾಗಿ, ಚೀನಾ ಈಸ್ಟರ್ನ್ ಏರ್‌ಲೈನ್ಸ್‌ನೊಂದಿಗೆ ತನಿಖೆಗೆ ಬೆಂಬಲ ನೀಡುವುದಾಗಿ ಬೋಯಿಂಗ್ ಚೀನಾ ಮಂಗಳವಾರ ತಿಳಿಸಿದೆ.

ಅಮೆರಿಕದಲ್ಲಿರುವ ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿಯೊಂದಿಗೆ ಸಂಪರ್ಕದಲ್ಲಿರುವುದಾಗಿ ಮತ್ತು ತನ್ನ ತಾಂತ್ರಿಕ ತಜ್ಞರು ತನಿಖೆಯನ್ನು ನಡೆಸುವಲ್ಲಿ ಚೀನಾದ ನಾಗರಿಕ ವಿಮಾನಯಾನ ಆಡಳಿತಕ್ಕೆ ಸಹಾಯ ಮಾಡಲು ಸಿದ್ಧರಾಗಿದ್ದಾರೆ ಎಂದು ಬೋಯಿಂಗ್ ಚೀನಾ ಹೇಳಿರುವುದಾಗಿ ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.

132 ಮಂದಿ ಪ್ರಯಾಣಿಸುತ್ತಿದ್ದ ಚೀನಾ ಈಸ್ಟರ್ನ್‌ ಏರ್‌ಲೈನ್ಸ್‌ನ ಬೋಯಿಂಗ್‌ 737–800 ವಿಮಾನವು ದಕ್ಷಿಣ ಚೀನಾದ ಪರ್ವತ ಪ್ರದೇಶದಲ್ಲಿ ಸೋಮವಾರ ಪತನವಾಗಿದೆ. ನೈರುತ್ಯ ಚೀನಾದ ಯುನಾನ್‌ಪ್ರಾಂತ್ಯದ ರಾಜಧಾನಿ ಕುನ್‌ಮಿಂಗ್‌ನಿಂದ ಗುವಾಂಗ್‌ಡಾಂಗ್‌ ಪ್ರಾಂತ್ಯದ ರಾಜಧಾನಿ ಗುವಾಂಗ್‌ಝೌಗೆ ಈ ವಿಮಾನವು ಸಂಚರಿಸುತ್ತಿತ್ತು. ವಿಮಾನದಲ್ಲಿ ಇದ್ದವರಲ್ಲಿ ಯಾರೂ ಬದುಕುಳಿದಿರುವ ಸಾಧ್ಯತೆ ಇಲ್ಲ ಎಂದು ಚೀನಾದ ಮಾಧ್ಯಮಗಳು ವರದಿ ಮಾಡಿವೆ. ವಿಮಾನದಲ್ಲಿ ಒಂಬತ್ತು ಮಂದಿ ಸಿಬ್ಬಂದಿ ಇದ್ದರು.

ADVERTISEMENT

ರಕ್ಷಣಾ ಕಾರ್ಯಕ್ಕಾಗಿ ಗುವಾಂಗ್‌ಸ್ಕಿ ಪ್ರಾದೇಶಿಕ ಆರೋಗ್ಯ ಆಯೋಗ ಸ್ಥಳಕ್ಕೆ 12 ನುರಿತ ವೈದ್ಯರನ್ನು ಕಳುಹಿಸಿದೆ. ಅಲ್ಲದೆ, 80 ಮಂದಿ ವೈದ್ಯಕೀಯ ಸಿಬ್ಬಂದಿ ಮತ್ತು 36 ಆ್ಯಂಬುಲೆನ್ಸ್‌ಗಳನ್ನು ಕಳುಹಿಸಲಾಗಿದೆ.

ವಿಮಾನ ಅಪಘಾತಕ್ಕೆ ಕಾರಣವೇನು ಎಂಬುದರ ಬಗ್ಗೆ ತನಿಖೆ ನಡೆಸುವಂತೆ ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್‌ ಅವರು ಆದೇಶಿಸಿದ್ದರು.

ತುರ್ತು ಪ್ರತಿಕ್ರಿಯೆ ಕಾರ್ಯವನ್ನು ಪ್ರಾರಂಭಿಸಿರುವುದಾಗಿ ಚೀನಾ ಈಸ್ಟರ್ನ್‌ ಏರ್‌ಲೈನ್ಸ್‌ ಹೇಳಿದೆ. ಜೊತೆಗೆ, ಪತನಗೊಂಡ ವಿಮಾನದ ತೆರವು, ಅಪಘಾತದ ತನಿಖೆ, ಕುಟುಂಬಗಳಿಗೆ ನೆರವು, ಕಾನೂನು ಬೆಂಬಲ, ಸಾರ್ವಜನಿಕ ಸಂಬಂಧಗಳು, ಭದ್ರತೆ, ಹಣಕಾಸು ವಿಮೆ ಮತ್ತು ಸರಕು ವಿಲೇವಾರಿಗಾಗಿ ಒಂಬತ್ತು ವಿಶೇಷ ಕಾರ್ಯ ಪಡೆಗಳನ್ನು ರಚಿಸಿದೆ.

ವಿಮಾನದ ಪತನಕ್ಕೆ ನಿಖರ ಕಾರಣವನ್ನು ತನಿಖೆ ನಡೆಸಲಾಗುವುದು ಎಂದು ಏರ್‌ಲೈನ್ಸ್‌ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.