ADVERTISEMENT

ಬಾಂಬ್‌ ಬೆದರಿಕೆ; ಎಫ್‌–16 ಬೆಂಗಾವಲಿನಲ್ಲಿ ಸಾಗಿದ ಸಿಂಗಪುರ ವಿಮಾನ

ಪಿಟಿಐ
Published 26 ಮಾರ್ಚ್ 2019, 19:38 IST
Last Updated 26 ಮಾರ್ಚ್ 2019, 19:38 IST
   

ಸಿಂಗಪುರ/ನವದೆಹಲಿ: ಮುಂಬೈನಿಂದ ಸಿಂಗಪುರಕ್ಕೆ ಹೊರಟಿದ್ದ ಸಿಂಗಪುರ ಏರ್‌ಲೈನ್ಸ್‌ನ ವಿಮಾನಕ್ಕೆ ಬಾಂಬ್‌ ಬೆದರಿಕೆ ಬಂದ ಕಾರಣ ಅದನ್ನು ಎರಡು ಎಫ್‌ –16 ವಿಮಾನಗಳ ಬೆಂಗಾವಲಿನಲ್ಲಿ ತಂದು ಸಿಂಗಪುರ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಇಳಿಸಲಾಯಿತು.

263 ಪ್ರಯಾಣಿಕರಿದ್ದ ಈ ವಿಮಾನ (ಎಸ್‌ಕ್ಯೂ – 423) ಮಂಗಳವಾರ ಬೆಳಿಗ್ಗೆ 11.35ಕ್ಕೆ ಹೊರಟಿತ್ತು. ಈ ವೇಳೆಗೆ ಕರೆ ಮಾಡಿದ್ದ ವ್ಯಕ್ತಿಯೊಬ್ಬ ವಿಮಾನದಲ್ಲಿ ಬಾಂಬ್‌ ಇದೆ ಎಂದು ಹೇಳಿದ. ತಕ್ಷಣವೇ ಜಾಗೃತರಾದ ಸಿಂಗಪುರದ ವಾಯುಪಡೆ ಅಧಿಕಾರಿಗಳು ಎರಡು ಎಫ್‌ –16 ವಿಮಾನಗಳನ್ನು ಬೆಂಗಾವಲಿಗೆ ಕಳುಹಿಸಿದರು. ಸ್ಥಳೀಯ ಕಾಲಮಾನ ರಾತ್ರಿ 8ಕ್ಕೆ ವಿಮಾನ ಸುರಕ್ಷಿತವಾಗಿ ತಲುಪಿದೆ. ನಿಗದಿತ ಅವಧಿಗಿಂತ 31 ನಿಮಿಷ ಮುಂಚಿತವಾಗಿ ಬಂದಿದೆ ಎಂದು ಅಧಿಕಾರಿಗಳು ಹೇಳಿದರು.

ಎಲ್ಲ ಪ್ರಯಾಣಿಕರನ್ನು ಸುರಕ್ಷಿತವಾಗಿ ಕರೆತರಲಾಗಿದೆ. ಒಬ್ಬರು ಮಹಿಳೆ ಮತ್ತು ಮಗುವನ್ನು ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ. ವಿಮಾನ ಹಾರಾಟದಲ್ಲಿ ಯಾವುದೇ ಅಡಚಣೆ ಉಂಟಾಗಿಲ್ಲ ಎಂದು ಸಿಂಗಪುರ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ವಕ್ತಾರರು ಹೇಳಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.