ADVERTISEMENT

ಬ್ರಿಟನ್‌: ಸಂಸತ್‌ ಸದಸ್ಯತ್ವಕ್ಕೆ ಮಾಜಿ ಪ್ರಧಾನಿ ಬೋರಿಸ್‌ ಜಾನ್ಸನ್‌ ರಾಜೀನಾಮೆ

ವಿಶೇಷಾಧಿಕಾರ ಸಮಿತಿಯಿಂದ ಪತ್ರ ಸ್ವೀಕರಿಸಿದ ಹಿನ್ನೆಲೆಯಲ್ಲಿ ನಿರ್ಧಾರ

ಪಿಟಿಐ
Published 10 ಜೂನ್ 2023, 13:40 IST
Last Updated 10 ಜೂನ್ 2023, 13:40 IST
ಬೋರಿಸ್‌ ಜಾನ್ಸನ್‌ 
ಬೋರಿಸ್‌ ಜಾನ್ಸನ್‌    

ಲಂಡನ್‌ (ಪಿಟಿಐ): ಬ್ರಿಟನ್‌ ಮಾಜಿ ಪ್ರಧಾನಿ ಬೋರಿಸ್‌ ಜಾನ್ಸನ್‌ ಅವರು ತಮ್ಮ ಸಂಸತ್‌ ಸ್ಥಾನಕ್ಕೆ ಶುಕ್ರವಾರ ದಿಢೀರ್‌ ರಾಜೀನಾಮೆ ನೀಡಿದ್ದಾರೆ. 

ಕೋವಿಡ್ ಲಾಕ್‌ಡೌನ್‌ ನಿಯಮಗಳನ್ನು ಮುರಿದು ಡೌನಿಂಗ್‌ ಸ್ಟ್ರೀಟ್‌ನಲ್ಲಿ (ಬ್ರಿಟನ್‌ ಪ್ರಧಾನಿ ಕಚೇರಿ ಇರುವ ಸ್ಥಳ) ಸಂತೋಷ ಕೂಟ ಏರ್ಪಡಿಸಿ ಸಂಸತ್ತನ್ನು ದಾರಿ ತಪ್ಪಿಸಿದ ಪ್ರಕರಣದಲ್ಲಿ (ಪಾರ್ಟಿಗೇಟ್‌ ಪ್ರಕರಣ) ಜಾನ್ಸನ್‌ ವಿರುದ್ಧ ಸಂಸದರೊಬ್ಬರ ನೇತೃತ್ವದ ವಿಶೇಷಾಧಿಕಾರ ಸಮಿತಿ ತನಿಖೆ ನಡೆಸುತ್ತಿತ್ತು.

ಈ ಪ್ರಕರಣದಲ್ಲಿ ದಂಡನೆ ವಿಧಿಸುವುದಾಗಿ ಹಕ್ಕುಬಾಧ್ಯತಾ ಸಮಿತಿಯಿಂದ ಗೌಪ್ಯ ಪತ್ರ ಸ್ವೀಕರಿಸಿದ ಬಳಿಕ  ಜಾನ್ಸನ್‌ ರಾಜೀನಾಮೆ ನೀಡುವ ನಿರ್ಧಾರ ತೆಗೆದುಕೊಂಡಿದ್ದಾರೆ.

ADVERTISEMENT

ವಿಶೇಷಾಧಿಕಾರ ಸಮಿತಿಯ ತನಿಖೆಯನ್ನು ‘ಕಾಂಗರೂ ಕೋರ್ಟ್‌’ ಎಂದು ಕರೆದಿರುವ ಅವರು, ‘ನನ್ನ ಮೇಲೆ ಎಲ್ಲರೂ ಒಟ್ಟಾಗಿ ದಾಳಿ ನಡೆಸುತ್ತಿದ್ದಾರೆ’ ಎಂದು ಪ್ರತಿಕ್ರಿಯಿಸಿದ್ದಾರೆ. 

ಆದರೆ, ಈ ಪತ್ರವನ್ನು ಮತ್ತು ತನಿಖಾ ವರದಿಯನ್ನು ಸಮಿತಿಯು ಇನ್ನೂ ಸಾರ್ವಜನಿಕವಾಗಿ ಬಹಿರಂಗಪಡಿಸಿಲ್ಲ ಎಂದು ಅವರು ಹೇಳಿದ್ದಾರೆ. 

‘ಸಮಿತಿಯ ಪತ್ರವನ್ನು ಸ್ವೀಕರಿಸಿ ಗೊಂದಲ ಮತ್ತು ಗಾಬರಿಗೆ ಒಳಗಾದೆ. ಸಂಸತ್ತಿನಿಂದ ಹೊರ ಹೋಗುತ್ತಿರುವುದು ನೋವು ತಂದಿದೆ. ನಾನು ರಾಜೀನಾಮೆ ನೀಡದಿದ್ದರೆ ಸಂಸದ ಹ್ಯಾರಿಯೆಟ್‌ ಹರ್ಮನ್‌ ನೇತೃತ್ವದ ಸಮಿತಿಯು ನನ್ನನ್ನು ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿ ಮತ್ತು ಒತ್ತಾಯಪೂರ್ವಕವಾಗಿ ಹೊರಹಾಕುತ್ತಿತ್ತು’ ಎಂದು ಹೇಳಿದ್ದಾರೆ.

‘ಬ್ರಿಕ್ಸಿಟ್‌ ಸ್ಥಾಪಿಸಿದ್ದಕ್ಕಾಗಿ ಮತ್ತು 2016ರ ಜನಮತವನ್ನು ತಲೆಕೆಳಗು ಮಾಡಿದ್ದಕ್ಕಾಗಿ ನನ್ನ ಮೇಲೆ ಸೇಡು ತೀರಿಸಿಕೊಳ್ಳಲಾಗುತ್ತಿದೆ’ ಎಂದು ಜಾನ್ಸನ್‌ ಹೇಳಿದ್ದಾರೆ. 

ಜಾನ್ಸನ್‌ ಅವರು 2001ರಿಂದಲೂ ಸಂಸದರಾಗಿ ಸೇವೆ ಸಲ್ಲಿಸಿದ್ದಾರೆ. 2008 ರಿಂದ 2016ರ ವರೆಗೆ ಅವರು ಲಂಡನ್‌ನ ಮೇಯರ್‌ ಆಗಿದ್ದರು. 2019ರ ಜುಲೈನಿಂದ 2022ರ ಸೆಪ್ಟೆಂಬರ್‌ವರೆಗೆ ಬ್ರಿಟನ್‌ ಪ್ರಧಾನಿಯಾಗಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.