ಸಾವೊ ಪೌಲೊ: ಬ್ರೆಜಿಲ್ ವಿಮಾನ ದುರಂತಕ್ಕೆ ಸಂಬಂಧಿಸಿದಂತೆ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು ದುರಂತದ ಭೀಕರತೆಯನ್ನು ಎತ್ತಿ ತೋರಿಸಿವೆ.
ಕಸ್ಕಾವೇಲ್ ನಗರದಿಂದ ಸಾವೊ ಪೌಲೋ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸುತ್ತಿದ್ದ Voepass ಏರ್‌ಲೈನ್ಸ್‌ನ ATR-72 ವಿಮಾನ ವಿನೆದೊ ನಗರದ ಜನವಸತಿ ಪ್ರದೇಶದಲ್ಲಿ ಶುಕ್ರವಾರ ಪತನಗೊಂಡಿದೆ. ಇದರಿಂದ ಸಿಬ್ಬಂದಿ ಸೇರಿ 61 ಜನ ಮೃತಪಟ್ಟಿದ್ದಾರೆ.
ವಿಮಾನ ನೆಲಕ್ಕೆ ಅಪ್ಪಳಿಸುವ ಮುನ್ನ ನೇರವಾಗಿ ಚಲಿಸದೇ ಆಕಾಶದಲ್ಲೇ ಗಿರಕಿ ಹೊಡೆಯುತ್ತಾ ವೇಗವಾಗಿ ನೆಲಕ್ಕೆ ಅಪ್ಪಳಿಸಿದೆ. ಈ ಆತಂಕಕಾರಿ ವಿಡಿಯೊ ಸ್ಥಳೀಯರ ಮೊಬೈಲ್‌ನಲ್ಲಿ ಸೆರೆಯಾಗಿದೆ.
ವೊಪಾಸ್ ವಿಮಾನಯಾನ ಸಂಸ್ಥೆಗೆ ಸೇರಿದ ವಿಮಾನದಲ್ಲಿ 57 ಪ್ರಯಾಣಿಕರು ಮತ್ತು ನಾಲ್ವರು ಸಿಬ್ಬಂದಿಯಿದ್ದರು. ದುರಂತದಲ್ಲಿ ಯಾರೂ ಬದುಕುಳಿದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿಮಾನ ವಸತಿ ಪ್ರದೇಶದಲ್ಲಿ ಬಿದ್ದರೂ ನಾಗರಿಕರ ಸಾವು–ನೋವಾಗಿಲ್ಲ. ಒಂದು ವಸತಿ ಪ್ರದೇಶಕ್ಕೆ ಹಾನಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿಮಾನದ ಪೈಲಟ್ ವಿಮಾನ ಮನೆಗಳ ಮೇಲೆ ಬೀಳುವುದನ್ನು ಬಹುತೇಕ ತಪ್ಪಿಸಿದ್ದಾರೆ ಎಂದು ಪ್ರಾಥಮಿಕವಾಗಿ ಕಂಡು ಬಂದಿದೆ ಎಂದು ಹೇಳಿದ್ದಾರೆ.
ಗಿರಕಿ ಹೊಡೆಯುತ್ತಾ ಪತನವಾದ ಬ್ರೆಜಿಲ್‌ನ ಈ ವಿಮಾನ ಪತನ ಪ್ರಪಂಚದ ವಿಮಾನಯಾನ ತಜ್ಞರಿಗೆ ಆಶ್ಚರ್ಯ ತರಿಸಿದೆ. ಘಟನೆಗೆ ಕಾರಣ ಇನ್ನೂ ತಿಳಿದು ಬಂದಿಲ್ಲ. ಹವಾಮಾನ ವೈಪರಿತ್ಯದಿಂದ ಪೈಲಟ್ ಎಂಜಿನ್ ಮೇಲೆ ನಿಯಂತ್ರಣ ಕಳೆದುಕೊಂಡಿದ್ದಿರಬಹುದು ಎಂದು ಶಂಕಿಸಲಾಗಿದೆ.
Voepass ಏರ್‌ಲೈನ್ಸ್ ಬ್ರೆಜಿಲ್‌ನ ನಾಲ್ಕನೇ ಅತಿದೊಡ್ಡ ನಾಗರಿಕ ವಿಮಾನಯಾನ ಸಂಸ್ಥೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.