ರಿಯೊ ಡಿ ಜನೈರೊ: ಬ್ರೆಜಿಲ್ ಪ್ರಥಮ ಮಹಿಳೆ ಜನ್ಲಾ ಲುಲಾ ಡ ಸಿಲ್ವಾ ಅವರು, ಸುಳ್ಳು ಸುದ್ದಿಗಳಿಗೆ ಕಡಿವಾಣ ಹಾಕಲು ಸಾಮಾಜಿಕ ಮಾಧ್ಯಮಗಳನ್ನು ಹತೋಟಿಯಲ್ಲಿಡುವ ಅಗತ್ಯವಿದೆ ಎಂದು ಪ್ರತಿಪಾದಿಸಿದ್ದಾರೆ.
ಜಿ20 ಸದಸ್ಯ ರಾಷ್ಟ್ರಗಳ ಸಮಾವೇಶ ರಿಯೊ ಡಿ ಜನೈರೊದಲ್ಲಿ ಸೋಮವಾರ ಮತ್ತು ಮಂಗಳವಾರ ನಡೆಯಲಿದೆ. ಅದಕ್ಕೂ ಮುನ್ನ ನಡೆದ ಸಾಮಾಜಿಕ ಕಾರ್ಯಕ್ರಮದಲ್ಲಿ ಬ್ರಿಜಿಲ್ ಅಧ್ಯಕ್ಷ ಲೂಯಿಸ್ ಇನಾಸಿಯೊ ಲುಲಾ ಡಾ ಸಿಲ್ವ ಅವರ ಪತ್ನಿ ಜನ್ಲಾ ಭಾಗವಹಿಸಿದ್ದರು.
ಮಾತನಾಡುವ ವೇಳೆ ಇದ್ದಕ್ಕಿದ್ದಂತೆ ವ್ಯಂಗ್ಯವಾಗಿ ಅಭಿನಯಿಸಿದ ಜನ್ಲಾ, 'ಅದು ಎಲಾನ್ ಮಸ್ಕ್ ಎನಿಸುತ್ತದೆ. ನಾನು ನಿಮಗೆ ಹೆದರಲ್ಲ' ಎಂದಿದ್ದಾರೆ. ಕೆಟ್ಟ ಪದ ಬಳಸಿ, ಆಕ್ರೋಶ ವ್ಯಕ್ತಪಡಿಸಿ ಕಾಲೆಳೆದಿದ್ದಾರೆ.
ಈ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಎಕ್ಸ್/ಟ್ವಿಟರ್ ಮಾಲೀಕ ಮಸ್ಕ್ ಅವರು, ಜನ್ಲಾ ವಿಡಿಯೊಗೆ ಜೋರಾಗಿ ನಗುವ ಎಮೊಜಿ ಬಳಸಿ ಪ್ರತಿಕ್ರಿಯಿಸಿದ್ದಾರೆ. ಅಧ್ಯಕ್ಷ ಲೂಯಿಸ್ ಅವರನ್ನುದ್ದೇಶಿಸಿ, 'ಮುಂದಿನ ಚುನಾವಣೆಯಲ್ಲಿ ಸೋಲುತ್ತಾರೆ' ಎಂದು ವ್ಯಂಗ್ಯವಾಡಿದ್ದಾರೆ.
ದೇಶದಲ್ಲಿ ತನ್ನ ಕಾನೂನು ಪ್ರತಿನಿಧಿಯನ್ನು ಹೆಸರಿಸಲು ವಿಫಲವಾದದ್ದು ಮತ್ತು ನಕಲಿ ಸುದ್ದಿಗಳು, ದ್ವೇಷಪೂರಿತ ಸಂದೇಶಗಳನ್ನು ಹರಡುವ ಖಾತೆಗಳನ್ನು ನಿರ್ಬಂಧಿಸುವಂತೆ ನ್ಯಾಯಾಲಯ ನೀಡಿದ್ದ ಆದೇಶವನ್ನು ನಿರ್ಲಕ್ಷಿಸಿದ ಕಾರಣ ಬ್ರೆಜಿಲ್‌ನಲ್ಲಿ ಎಕ್ಸ್‌ಗೆ ಇದೇ ವರ್ಷ ಒಂದು ತಿಂಗಳವರೆಗೆ ನಿಷೇಧ ಹೇರಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.