ಲಂಡನ್: ‘ಐರೋಪ್ಯ ಒಕ್ಕೂಟದಿಂದ ಬ್ರಿಟನ್‌ನ ನಿರ್ಗಮನ ಅಂತ್ಯವಲ್ಲ, ಹೊಸ ಆರಂಭ’ ಎಂದು ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಹೇಳಿದ್ದಾರೆ.
ಧ್ವನಿಮುದ್ರಿತ ವಿಡಿಯೊದಲ್ಲಿ ಅವರು, ‘ಇದು ನಿಜವಾದ ರಾಷ್ಟ್ರೀಯ ನವೀಕರಣ ಮತ್ತು ಬದಲಾವಣೆಯ ಕ್ಷಣ’ ಎಂದು ಬ್ರಿಟನ್ ಜನರನ್ನು ಉದ್ದೇಶಿಸಿ ಹೇಳಿದ್ದಾರೆ.
ಬ್ರೆಕ್ಸಿಟ್ ಪರ ಏಕತೆಯ ಸಂದೇಶ ಸಾರುವ ಸಲುವಾಗಿ ಅವರು, ಸಚಿವ ಸಂಪುಟದ ಮೊದಲ ಸಭೆಯನ್ನು ಸುಂದರ್ಲೆಂಡ್‌ನಲ್ಲಿ ನಡೆಸಲು ತೀರ್ಮಾನಿಸಿ
ದ್ದಾರೆ. ಐರೋಪ್ಯ ಒಕ್ಕೂಟದಿಂದ ಹೊರಬರಲು 2016ರ ಜೂನ್‌ನಲ್ಲಿ ಬೆಂಬಲ ಘೋಷಿಸಿದ ನಗರ ಇದಾಗಿದೆ.
1973ರಿಂದ ಐರೋಪ್ಯ ಒಕ್ಕೂಟದ ಭಾಗವಾಗಿದ್ದ ಬ್ರಿಟನ್, ಇದರಿಂದ ಹೊರಬಂದು ‘ಬ್ರೆಕ್ಸಿಟ್’ ರೂಪ ತಾಳಲು ಮೂರೂವರೆ ವರ್ಷದ ಹಾದಿಯನ್ನು ಸವೆಸಿದೆ. ಒಕ್ಕೂಟದಿಂದ ಬೇರ್ಪಡಲು ನಡೆದ ಮತ ಸಮೀಕ್ಷೆಯಲ್ಲಿ ಬ್ರೆಕ್ಸಿಟ್ ಪರವಾಗಿ ಶೇ 52ರಷ್ಟು ಮತಗಳು ದೊರೆತಿದ್ದವು.
ಬ್ರಿಟನ್‌ನ ನಿರ್ಗಮನದಿಂದಾಗಿ ಐರೋಪ್ಯ ಒಕ್ಕೂಟದಲ್ಲಿ 27 ದೇಶಗಳು ಉಳಿಯಲಿವೆ.
‘ಬ್ರಿಟನ್ ನಿರ್ಗಮನ ಯುರೋಪಿನ ಪಾಲಿಗೆ ಹೊಸ ಉದಯ ಕಾಲ’ ಎಂದು ಐರೋಪ್ಯ ಒಕ್ಕೂಟ ಹೇಳಿದೆ.
ಬ್ರೆಕ್ಸಿಟ್ ಹಿಂದಿನ ಕಥೆ: ಐರೋಪ್ಯ ಒಕ್ಕೂಟದ ಸದಸ್ಯ ರಾಷ್ಟ್ರವಾಗಿದ್ದರೂ ಬ್ರಿಟನ್ ಇದರಲ್ಲಿ ಪೂರ್ಣ ಮನಸ್ಸಿನಿಂದ ತೊಡಗಿಸಿಕೊಂಡಿರಲಿಲ್ಲ. ಒಕ್ಕೂಟ ತೊರೆಯುವ ಕುರಿತು ಬಹು ಹಿಂದಿನಿಂದಲೇ ಆಲೋಚನೆ ಮಾಡಿತ್ತು. ಒಕ್ಕೂಟ ವಿಧಿಸಿದ ನಿಯಮಗಳ ಕುರಿತು ಬ್ರಿಟನ್ ನಾಯಕರಲ್ಲಿ ಸಹಮತವಿರಲಿಲ್ಲ.
2008ರಲ್ಲಿ ಆರ್ಥಿಕ ಬಿಕ್ಕಟ್ಟು ಎದುರಾದಾಗ ಒಕ್ಕೂಟದಿಂದ ಬ್ರಿಟನ್ ಹೊರಬರಬೇಕೆಂಬ ಒತ್ತಡ ಹೆಚ್ಚಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.