ಕಜಾನ: ಗಾಜಾಪಟ್ಟಿಯಲ್ಲಿ ತಕ್ಷಣ ಮತ್ತು ಶಾಶ್ವತವಾಗಿ ಕದನ ವಿರಾಮ ಘೋಷಿಸಿ ಇಸ್ರೇಲ್ ಮತ್ತು ಪ್ಯಾಲೆಸ್ಟೀನ್‌ನಲ್ಲಿ ಒತ್ತೆಯಾಳಾಗಿರಿಸಿಕೊಂಡವರನ್ನು ಬಿಡುಗಡೆ ಮಾಡಬೇಕೆಂದು ಬ್ರಿಕ್ಸ್ ನಾಯಕರು ಒತ್ತಾಯಿಸಿದ್ದಾರೆ.
ಇದೇ ವೇಳೆ ನಾಗರಿಕರನ್ನು ಸಾಮೂಹಿಕ ಹತ್ಯೆ ಮಾಡಿದ ಇಸ್ರೇಲ್ ನಡೆಯನ್ನು ಖಂಡಿಸಿದ್ದಾರೆ.
ಇಸ್ರೇಲ್ ಕ್ಷಿಪಣಿ ದಾಳಿ ನಡೆಸಿದ ಇರಾನ್ ಕೂಡ ಬ್ರಿಕ್ಸ್ ಒಕ್ಕೂಟದಲ್ಲಿದೆ.
ಬ್ರಿಕ್ಸ್‌ನಲ್ಲಿ ಬ್ರೆಜಿಲ್, ಭಾರತ, ಚೀನಾ, ರಷ್ಯಾ, ದಕ್ಷಿಣ ಆಫ್ರಿಕಾ ದೇಶಗಳು ಆರಂಭದಲ್ಲಿ ಸದಸ್ಯತ್ವ ಹೊಂದಿದ್ದವು. ಬಳಿಕ ಈ ಒಕ್ಕೂಟ ಸದಸ್ಯತ್ವವನ್ನು ವಿಸ್ತರಿಸಿ ಈಜಿಪ್ಟ್, ಇರಾನ್, ಸೌದಿ ಅರೇಬಿಯಾ ಮತ್ತು ಯುಎಇ ರಾಷ್ಟ್ರಗಳಿಗೆ ಸದಸ್ಯತ್ವ ನೀಡಿದೆ.
‘ಆಕ್ರಮಿತ ಪ್ಯಾಲೆಸ್ಟೀನ್ ಪ್ರಾಂತ್ಯದ ಪರಿಸ್ಥಿತಿ ಮತ್ತು ಅಲ್ಲಿನ ಜನರು ಸಂಕಷ್ಟಕ್ಕೀಡಾಗಿರುವ ಬಗ್ಗೆ ನಮಗೆ ಕಾಳಜಿಯಿದೆ. ಗಾಜಾ ಪಟ್ಟಿ ಮತ್ತು ಪಶ್ಚಿಮ ಭಾಗದಲ್ಲಿ ಇಸ್ರೇಲ್ ಮಿಲಿಟರಿ ನಡೆಸಿದ ದಾಳಿ ಅಮಾಯಕ ನಾಗರಿಕರ ಸಾಮೂಹಿಕ ಹತ್ಯೆಗೆ ಕಾರಣವಾಯಿತು. ನೂರಾರು ನಾಗರಿಕರು ಗಾಯಗೊಂಡರು, ಸಾವಿರಾರು ಜನ ಸ್ಥಳಾಂತರಗೊಂಡರು, ಮೂಲ ಸೌಕರ್ಯಗಳ ನಾಶವಾಯಿತು. ಇಸ್ರೇಲ್‌ನ ಈ ನಡೆ ನಿಜಕ್ಕೂ ಖಂಡನೀಯ. ಗಾಜಾಪಟ್ಟಿಯಲ್ಲಿ ಈಗಲೇ ಕದನ ವಿರಾಮ ಘೋಷಿಸಿ ಒತ್ತೆಯಾಳುಗಳನ್ನು ಬಿಡುಗಡೆ ಮಾಡಬೇಕು. ಗಾಜಾ ಪಟ್ಟಿಗೆ ಮಾನವೀಯ ನೆರವಿನ ಪ್ರಮಾಣದ ಪೂರೈಕೆ ಮತ್ತು ಎಲ್ಲಾ ಆಕ್ರಮಣಕಾರಿ ಕ್ರಮಗಳನ್ನು ನಿಲ್ಲಿಸಬೇಕು’ ಎಂದು ಬ್ರಿಕ್ಸ್ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.