ಕಜಾನ್: ಗಾಜಾ ಪಟ್ಟಿಯಲ್ಲಿ ಶಾಶ್ವತ ಕದನ ವಿರಾಮವನ್ನು ತಕ್ಷಣವೇ ಘೋಷಿಸಬೇಕು ಎಂದು ಬ್ರಿಕ್ಸ್ ದೇಶಗಳು ಬುಧವಾರ ಕರೆನೀಡಿವೆ. ಇಲ್ಲಿ ಇಸ್ರೇಲ್ ನಡೆಸುತ್ತಿರುವ ಮಿಲಿಟರಿ ದಾಳಿಯು ‘ನಾಗರಿಕರ ಸಾಮೂಹಿಕ ಹತ್ಯೆ’ಗೆ ಕಾರಣವಾಗುತ್ತಿದೆ ಎಂದು ಹೇಳಿರುವ ಬ್ರಿಕ್ಸ್, ದಾಳಿಯನ್ನು ಖಂಡಿಸಿದೆ.
‘ಎರಡೂ ಕಡೆಗಳಲ್ಲಿ’ ಇರುವ ಒತ್ತೆಯಾಳುಗಳನ್ನು ಬಿಡುಗಡೆ ಮಾಡಬೇಕು ಎಂದು ಕೂಡ ಬ್ರಿಕ್ಸ್ ದೇಶಗಳು ಕರೆನೀಡಿವೆ. ಬ್ರಿಕ್ಸ್ ದೇಶಗಳ ಕಜಾನ್ ಘೋಷಣೆಯಲ್ಲಿ ಪಶ್ಚಿಮ ಏಷ್ಯಾದಲ್ಲಿನ ಸಂಘರ್ಷವು ಪ್ರಮುಖವಾಗಿ ಉಲ್ಲೇಖವಾಗಿದೆ. ಬ್ರಿಕ್ಸ್‌ನ ಸದಸ್ಯ ರಾಷ್ಟ್ರಗಳ ಪೈಕಿ ಇರಾನ್ ಕೂಡ ಒಂದಾಗಿದೆ.
ಅಕ್ಟೋಬರ್ 1ರಂದು ಇಸ್ರೇಲ್ ಮೇಲೆ ಇರಾನ್ ಕ್ಷಿಪಣಿ ದಾಳಿ ನಡೆಸಿದೆ. ಇದಕ್ಕೆ ಪ್ರತಿಯಾಗಿ ಇಸ್ರೇಲ್‌ನಿಂದ ದಾಳಿ ನಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ.
ಸಿರಿಯಾದಲ್ಲಿ ಇರುವ ಇರಾನ್‌ನ ರಾಯಭಾರ ಕಚೇರಿಯ ಮೇಲೆ ಇಸ್ರೇಲ್ ಏಪ್ರಿಲ್‌ನಲ್ಲಿ ನಡೆಸಿದ ವಾಯುದಾಳಿಯನ್ನು ಬ್ರಿಕ್ಸ್ ಘೋಷಣೆಯಲ್ಲಿ ಖಂಡಿಸಲಾಗಿದೆ. ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್‌ನ ಅಧಿಕಾರಿಗಳು ಈ ದಾಳಿಯಲ್ಲಿ ಹತರಾಗಿದ್ದರು.
ಮಾನವೀಯ ನೆಲೆಯಲ್ಲಿ ಕಾರ್ಯಾಚರಣೆ ನಡೆಸುತ್ತಿರುವವರ ಮೇಲೆ ಇಸ್ರೇಲ್ ಪಡೆಗಳು ನಡೆಸಿದ ದಾಳಿಯನ್ನು ಕೂಡ ಬ್ರಿಕ್ಸ್ ದೇಶಗಳು ಖಂಡಿಸಿವೆ.
ಸಂಬಂಧಪಟ್ಟ ಎಲ್ಲರೂ ಅತ್ಯಂತ ಸಂಯಮದಿಂದ ವರ್ತಿಸಬೇಕು, ಉದ್ರೇಕಕಾರಿ ಘೋಷಣೆಗಳನ್ನು ಹೊರಡಿಸಬಾರದು ಹಾಗೂ ಸಂಘರ್ಷವನ್ನು ಹೆಚ್ಚಿಸುವ ಕ್ರಮಗಳನ್ನು ಕೈಗೊಳ್ಳಬಾರದು ಎಂದು ಸಲಹೆ ನೀಡಿವೆ.
ಭಯೋತ್ಪಾದನೆಯು ಎಲ್ಲರೂ ಎದುರಿಸುತ್ತಿರುವ ಬೆದರಿಕೆ ಎಂದು ಹೇಳಿರುವ ಬ್ರಿಕ್ಸ್, ಭಯೋತ್ಪಾದಕ ಸಿದ್ಧಾಂತ ಹರಡುವುದನ್ನು ತಡೆಯಲು, ಭಯತ್ಪಾದನೆಯ ಉದ್ದೇಶಕ್ಕೆ ಆಧುನಿಕ ತಂತ್ರಜ್ಞಾನದ ಬಳಕೆ ತಡೆಗೆ, ಭಯೋತ್ಪಾದಕರು ಒಂದು ದೇಶದಿಂದ ಇನ್ನೊಂದು ದೇಶ ಪ್ರವೇಶಿಸುವುದನ್ನು ಹಾಗೂ ಭಯೋತ್ಪಾದಕರಿಗೆ ಹಣಕಾಸಿನ ನೆರವು ಒದಗಿಸುವುದನ್ನು ತಡೆಯಲು ನಿರ್ಣಾಯಕ ಕ್ರಮಗಳನ್ನು ಕೈಗೊಳ್ಳುವುದಾಗಿ ಹೇಳಿದೆ.
ಭಯೋತ್ಪಾದನೆಯನ್ನು ಯಾವುದೇ ಧರ್ಮ, ರಾಷ್ಟ್ರ, ನಾಗರಿಕತೆ ಅಥವಾ ಸಮುದಾಯದ ಜೊತೆ ಸಮೀಕರಿಸಬಾರದು ಎಂಬುದನ್ನು ಪುನರುಚ್ಚರಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.