ADVERTISEMENT

‘ಬ್ರಿಕ್ಸ್‌’ ಶೃಂಗಸಭೆ: ಜಾಗತಿಕ ಮಟ್ಟದಲ್ಲಿ ಶಕ್ತಿ ಪ್ರದರ್ಶನಕ್ಕೆ ಪುಟಿನ್ ಮುಂದು

ಏಜೆನ್ಸೀಸ್
Published 22 ಅಕ್ಟೋಬರ್ 2024, 0:01 IST
Last Updated 22 ಅಕ್ಟೋಬರ್ 2024, 0:01 IST
<div class="paragraphs"><p>ವ್ಲಾದಿಮರ್ ಪುಟಿನ್‌&nbsp;</p></div>

ವ್ಲಾದಿಮರ್ ಪುಟಿನ್‌ 

   

ವಾಷಿಂಗ್ಟನ್‌: ‘ಬ್ರಿಕ್ಸ್‌’ ಶೃಂಗಸಭೆಯು ಮಂಗಳವಾರ ರಷ್ಯಾದ ಕಜಾನ ನಗರದಲ್ಲಿ ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ನೇತೃತ್ವದಲ್ಲಿ ನಡೆಯಲಿದೆ. ಈ ಸಮಾವೇಶದಲ್ಲಿ ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್‌, ಭಾರತದ ಪ್ರಧಾನಿ ನರೇಂದ್ರ ಮೋದಿ, ಟರ್ಕಿಯ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೋಗನ್, ಇರಾನ್‌ನ ಅಧ್ಯಕ್ಷ ಡಾ.ಮಸೂದ್‌ ಪೆಜೆಶ್ಕಿಯಾನ್‌ ಸೇರಿದಂತೆ ಪ್ರಮುಖರು ಭಾಗವಹಿಸಲಿದ್ದಾರೆ.

ಉಕ್ರೇನ್‌ ಯುದ್ಧಕ್ಕೆ ಸಂಬಂಧಿಸಿದಂತೆ ಪುಟಿನ್‌ ವಿರುದ್ಧ ಅಂತರರಾಷ್ಟ್ರೀಯ ಬಂಧನ ವಾರಂಟ್‌ ಜಾರಿಯಾಗಿದೆ. ಈ ಸಂದರ್ಭದಲ್ಲಿ ತಮ್ಮ ಬೆಂಬಲ ಹೆಚ್ಚಿಸಿಕೊಳ್ಳಲು ಪುಟಿನ್ ಶೃಂಗಸಭೆ ಆಯೋಜಿಸಿದ್ದಾರೆ ಎಂದು ವಿಶ್ಲೇಷಿಸಲಾಗಿದೆ.

ADVERTISEMENT

ಪಾಶ್ಚಿಮಾತ್ಯ ರಾಷ್ಟ್ರಗಳ ಒಕ್ಕೂಟಕ್ಕೆ ಪರ್ಯಾಯವಾಗಿ ಈ ಮಿತ್ರಕೂಟ ರಚನೆಯಾಗಿದೆ ಎಂದು ಹೇಳಲಾಗಿದೆ. ಆರಂಭದಲ್ಲಿ ಬ್ರೆಜಿಲ್‌, ರಷ್ಯಾ, ಭಾರತ, ಚೀನಾ ಹಾಗೂ ದಕ್ಷಿಣ ಆಫ್ರಿಕಾ ರಾಷ್ಟ್ರಗಳು ಮಾತ್ರ ಸದಸ್ಯತ್ವ ಹೊಂದಿದ್ದವು. ಈ ವರ್ಷ ಇರಾನ್‌, ಈಜಿಪ್ಟ್‌, ಇಥಿಯೋಪಿಯಾ, ಯುನೈಟೆಡ್‌ ಅರಬ್‌ ಎಮಿರೇಟ್ಸ್‌, ಸೌದಿ ಅರೇಬಿಯಾ ರಾಷ್ಟ್ರಗಳು ಸೇರ್ಪ‍ಡೆಯಾದವು. ಟರ್ಕಿ, ಅಜರ್‌ಬೈಜಾನ್‌, ಮಲೇಷ್ಯಾ ಕೂಡ ಔಪಚಾರಿಕವಾಗಿ ಸೇರ್ಪಡೆಗೆ ಅರ್ಜಿ ಸಲ್ಲಿಸಿದ್ದು, ಇನ್ನಷ್ಟು ರಾಷ್ಟ್ರಗಳು ಸೇರ್ಪಡೆಯಾಗಲು ಒಪ್ಪಿಗೆ ಸೂಚಿಸಿವೆ. 

‘ಶೃಂಗಸಭೆಯಲ್ಲಿ 32 ರಾಷ್ಟ್ರಗಳು ಭಾಗವಹಿಸುವುದಾಗಿ ತಿಳಿಸಿವೆ. 20 ರಾಷ್ಟ್ರಗಳ ಮುಖ್ಯಸ್ಥರೇ ಭಾಗವಹಿಸಲಿದ್ದಾರೆ. ಪುಟಿನ್‌ ಅವರ ವಿದೇಶಾಂಗ ನೀತಿಗೆ ಸಿಕ್ಕ ಅತಿ ದೊಡ್ಡ ಯಶಸ್ಸು ಇದು’ ಎಂದು ರಷ್ಯಾದ ವಿದೇಶಾಂಗ ನೀತಿಯ ಅಧಿಕಾರಿ ಯುರಿ ಉಶಾಕೋವ್‌ ತಿಳಿಸಿದ್ದಾರೆ.

‘ಮಿತ್ರರಾಷ್ಟ್ರಗಳ ಮುಖ್ಯಸ್ಥರ ಜತೆ ಪುಟಿನ್‌ ಅವರು 20 ದ್ವಿಪಕ್ಷೀಯ ಸಭೆ ನಡೆಸಲಿದ್ದಾರೆ. ಹಲವು ಒಪ್ಪಂದಗಳಿಗೆ ಸಹಿ ಹಾಕಲಿದ್ದಾರೆ. ವಿದೇಶಾಂಗ ನೀತಿಗೆ ಸಂಬಂಧಿಸಿದಂತೆ ರಷ್ಯಾ ನೆಲದಲ್ಲಿ  ನಡೆಯಲಿರುವ ಅತಿ ದೊಡ್ಡ ಶೃಂಗಸಭೆ ಇದಾಗಿದೆ’ ಎಂದು ಯುರಿ ಸಂತಸ ವ್ಯಕ್ತಪಡಿಸಿದ್ದಾರೆ. 

‘ಪುಟಿನ್ ಅವರನ್ನು ಒಂಟಿಯನ್ನಾಗಿಸಲು ಪಾಶ್ಚಿಮಾತ್ಯ ರಾಷ್ಟ್ರಗಳು ಹೊರಟಿದ್ದವು. ಅವುಗಳಿಗೆ ಸಡ್ಡು ಹೊಡೆಯುವ ನಿಟ್ಟಿನಲ್ಲಿ ಈ ಶೃಂಗಸಭೆಯು ವೈಯಕ್ತಿಕವಾಗಿಯೂ ಪುಟಿನ್‌ ಅವರಿಗೆ ಮಹತ್ವಾಗಿದೆ’ ಎಂದು ಕಾರ್ನೆಜಿ ರಷ್ಯಾ ಯುರೇಷಿಯಾ ಸೆಂಟರ್‌ನ ನಿರ್ದೇಶಕ ಅಲೆಕ್ಸಾಂಡರ್‌ ಗಬುಯೆವ್‌ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.