ಲಂಡನ್: ಐರೋಪ್ಯ ಒಕ್ಕೂಟದಿಂದ ಬ್ರಿಟನ್ ಕೊನೆಗೂ ಹೊರಬಂದಿದೆ. ಶುಕ್ರವಾರ ಮಧ್ಯರಾತ್ರಿ ಬಳಿಕ ಆರ್ಥಿಕ ಒಕ್ಕೂಟದ ಭಾಗವಾಗಿ ಬ್ರಿಟನ್ ಉಳಿದಿಲ್ಲ. 2016ರ ಜೂನ್‌ನಲ್ಲಿ ‘ಬ್ರೆಕ್ಸಿಟ್‘ (ಬ್ರಿಟನ್+ಎಕ್ಸಿಟ್) ಪರವಾಗಿ ಜನರು ಮತ ಹಾಕಿದ ಬಳಿಕ ಮೂರೂವರೆ ವರ್ಷಗಳಲ್ಲಿ ಇದು ಕಾರ್ಯರೂಪಕ್ಕೆ ಬಂದಿದೆ.
ಈ ಐತಿಹಾಸಿಕ ಕ್ಷಣವನ್ನು ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರು ಶ್ಲಾಘಿಸಿದರೆ, ರಾಷ್ಟ್ರದಾದ್ಯಂತ ಜನರುಸಂಭ್ರಮಾಚರಣೆಗಳಲ್ಲಿ ಪಾಲ್ಗೊಂಡರು. ಬ್ರಿಟನ್‌ನಲ್ಲಿ ಹೊಸ ಶಕೆಯ ಆರಂಭ ಎಂದು ದೇಶವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ಜಾನ್ಸನ್ ಹೇಳಿದ್ದಾರೆ. ಬ್ರಿಟನ್‌ನ ಪ್ರತಿಯೊಂದು ಭಾಗಕ್ಕೂ ಅವಕಾಶಗಳು ಹಾಗೂ ಆದ್ಯತೆಗಳು ಸಿಗಲಿವೆ ಎಂದೂ ಭರವಸೆ ನೀಡಿದ್ದಾರೆ.
ಬ್ರಿಟನ್ ಹಾಗೂ ಐರೋಪ್ಯ ಒಕ್ಕೂಟ ಈಗಾಗಲೇ ಮಾಡಿಕೊಂಡಿರುವ ಒಪ್ಪಂದದ ಪ್ರಕಾರ, ಸಂಪೂರ್ಣವಾಗಿ ಬೇರ್ಪಡುವ ಪ್ರಕ್ರಿಯೆಗಳು ಶನಿವಾರದಿಂದ ಆರಂಭವಾಗಿದ್ದು, ಡಿಸೆಂಬರ್ ಕೊನೆಗೆ ಮುಕ್ತಾಯವಾಗಲಿವೆ.
ಹೊಸ ವ್ಯಾಪಾರಕ್ಕೆ ಸಂಬಂಧಿಸಿದಂತೆಐರೋಪ್ಯ ಒಕ್ಕೂಟದ ರಾಷ್ಟ್ರಗಳ ಜತೆ ಸ್ನೇಹಪರ ಮಾತುಕತೆಗೆ ಮುಂದಾಗುವುದಾಗಿ ಜಾನ್ಸನ್ ಹೇಳಿದ್ದಾರೆ. ಬ್ರಿಟನ್‌ಗೆ ಮರಳಿ ಸಿಕ್ಕಿರುವ ಸಾರ್ವಭೌಮತೆಯನ್ನು ಸಂಭ್ರಮಿಸಿರುವ ಅವರು, ಮುಕ್ತ ವ್ಯಾಪಾರ ಒಪ್ಪಂದ, ವಲಸೆ ನಿಯಂತ್ರಣ ಸೇರಿದಂತೆ ಯೋಗ್ಯ ಹಾಗೂ ಆರೋಗ್ಯಕರ ಪ್ರಜಾತಾಂತ್ರಿಕ ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.