ADVERTISEMENT

ಭಗವದ್ಗೀತೆ, ಬೈಬಲ್ ಹೆಸರಿನಲ್ಲಿ ಬ್ರಿಟಿಷ್ ಭಾರತೀಯ ಸಂಸದರ ಪ್ರಮಾಣ ವಚನ

ಪಿಟಿಐ
Published 11 ಜುಲೈ 2024, 15:50 IST
Last Updated 11 ಜುಲೈ 2024, 15:50 IST
<div class="paragraphs"><p>ರಿಷಿ ಸುನಕ್</p></div>

ರಿಷಿ ಸುನಕ್

   

ಲಂಡನ್: ಬ್ರಿಟನ್ ಸಂಸತ್ತಿಗೆ ಆಯ್ಕೆಯಾಗಿರುವ ಕನ್ಸರ್ವೇಟಿವ್ ಪಕ್ಷದ ಸಂಸದೆ, ಭಾರತೀಯ ಮೂಲದ ಶಿವಾನಿ ರಾಜಾ ಮತ್ತು ವಿರೋಧ ಪಕ್ಷದ ನಾಯಕರಾಗಿ ಆಯ್ಕೆಯಾದ ರಿಷಿ ಸುನಕ್ ಅವರು ‘ಭಗವದ್ಗೀತೆ’ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

‘ಲೀಸೆಸ್ಟರ್ ಈಸ್ಟ್ ಕ್ಷೇತ್ರವನ್ನು ಪ್ರತಿನಿಧಿಸಿ ಸಂಸತ್ತಿನಲ್ಲಿ ಆಯ್ಕೆಯಾಗಿರುವುದಕ್ಕೆ ಹೆಮ್ಮೆಯಾಗುತ್ತಿದೆ’ ಎಂದು
ಗುಜರಾತ್ ಮೂಲದ ಉದ್ಯಮಿ ಶಿವಾನಿ ಹೇಳಿದ್ದಾರೆ

ADVERTISEMENT

‘ಕಾನೂನಿನ ಪ್ರಕಾರ ಗೌರವಾನ್ವಿತ ಕಿಂಗ್ ಚಾರ್ಲ್ಸ್‌ ಮತ್ತು ಅವರ ಉತ್ತರಾಧಿಕಾರಿಗಳಿಗೆ ನಿಷ್ಠಳಾಗಿ ಇರುತ್ತೇನೆ ಎಂದು ನಾನು ಸರ್ವಶಕ್ತ ದೇವರ ಮೇಲೆ ಪ್ರಮಾಣ ಮಾಡುತ್ತೇನೆ. ದೇವರೇ... ನನಗೆ ನೆರವಾಗು’ ಎಂದು ಪಠ್ಯವನ್ನು ಬಲಗೈಯಲ್ಲಿ ಹಿಡಿದುಕೊಂಡು ಪ್ರಮಾಣ ವಚನ ಸ್ವೀಕರಿಸಿದರು. 

ಕೆಲವು ಬ್ರಿಟಿಷ್ ಸಿಖ್ ಸಂಸದರಾದ ತಾನ್ ಧೇಸಿ, ಗುರಿಂದರ್ ಸಿಂಗ್ ಜೋಸನ್, ಹರಪ್ರೀತ್ ಉಪ್ಪಲ್, ಸತ್ವೀರ್ ಕೌರ್ ಮತ್ತು ವಾರಿಂದರ್ ಸಿಂಗ್ ಜಸ್ ಅವರು ಸಿಖ್ ಧರ್ಮಗ್ರಂಥಗಳ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. 

ಕನ್ಸರ್ವೇಟಿವ್ ಪಕ್ಷದ ಮಾಜಿ ಸಂಸದ ಶೈಲೇಶ್ ವರ, ಲೇಬರ್ ಪಕ್ಷದ ಕನಿಷ್ಕ ನಾರಾಯಣ್ ಭಗವದ್ಗೀತೆ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಆಲ್ ಪಾರ್ಟಿ ಪಾರ್ಲಿಮೆಂಟರಿ ಗ್ರೂಪ್ (ಎಪಿಪಿಜಿ) ಅಧ್ಯಕ್ಷರಾಗಿರುವ ಬಾಬ್ ಬ್ಲ್ಯಾಕ್‌ಮನ್ ಅವರು ‘ಗೀತಾ’, ‘ಕಿಂಗ್ ಜೇಮ್ಸ್ ಬೈಬಲ್’ ಎರಡನ್ನೂ ಹಿಡಿದು ಪ್ರಮಾಣ ವಚನ ಸ್ವೀಕರಿಸಿದರು.

ಪ್ರೀತ್ ಕೌರ್ ಗಿಲ್, ‘ಸುಂದರ್ ಗುಟ್ಕಾ’ ಪ್ರಾರ್ಥನಾ ಪುಸ್ತಕವನ್ನು ಹಿಡಿದು ಪ್ರಮಾಣ ವಚನ ಸ್ವೀಕರಿಸಿದರು.

‘ಕಿಂಗ್ ಜೇಮ್ಸ್ ಬೈಬಲ್’ ಅನ್ನು ಕನ್ಸರ್ವೇಟಿವ್‌ ಪಕ್ಷದ ಪ್ರೀತಿ ಪಟೇಲ್ ಮತ್ತು ಕ್ಲೇರ್ ಕೌಟಿನ್ಹೋ ಮತ್ತು ಲಿಬರಲ್ ಡೆಮೋಕ್ರಾಟ್ ಮುನಿರಾ ವಿಲ್ಸನ್ ಪ್ರಮಾಣ ವಚನಕ್ಕಾಗಿ ಬಳಸಿದರು. 

ಟೋರಿ ಸಂಸದ ಗಗನ್ ಮಹೀಂದ್ರಾ, ಲೇಬರ್‌ ಪಾರ್ಟಿಯ ಲಿಸಾ ನಂದಿ ಮತ್ತು ಸೀಮಾ ಮಲ್ಹೋತ್ರಾ, ಭಾರತ ಮೂಲದ ಇಬ್ಬರು ಸ್ವತಂತ್ರ ಸಂಸದರಾದ ಶಾಕಟ್ ಆಡಮ್ ಮತ್ತು ಇಕ್ಬಾಲ್ ಮಹಮೂದ್ ಪ್ರಮಾಣ ವಚನ ಸ್ವೀಕರಿಸುವಾಗ ಧಾರ್ಮಿಕ ಗ್ರಂಥಗಳ ಹೆಸರನ್ನು ಬಳಸಲಿಲ್ಲ. 

ಟೋರಿ ಸಂಸದ ಡಾ. ನೀಲ್ ಶಾಸ್ತ್ರಿ-ಹಂಟ್ ಮತ್ತು ಲೇಬರ್‌ ಪಾರ್ಟಿಯ ಜೀವನ್ ಸಂಧರ್ ಮತ್ತು ಸೋನಿಯಾ ಕುಮಾರ್ ನಿಷ್ಠೆಯ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.